ಅಮೆರಿಕದಲ್ಲಿ ಸರಣಿ ಸುಂಟರಗಾಳಿಯ ಅಬ್ಬರ; 5 ಮಂದಿ ಮೃತ್ಯು
ವಾಷಿಂಗ್ಟನ್: ಸರಣಿ ಸುಂಟರಗಾಳಿಯ ಪ್ರಹಾರಕ್ಕೆ ನಡುಗಿರುವ ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಕನಿಷ್ಟ 5 ಮಂದಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಿಚಿಗನ್‍ನ ರಾಜಧಾನಿ ಲ್ಯಾನ್ಸಿಂಗ್ ನಗರಕ್ಕೆ ಗುರುವಾರ ರಾತ್ರಿ ಗಂಟೆಗೆ 125 ಕಿ.ಮೀ ವೇಗದೊಂದಿಗೆ ಸುಂಟರಗಾಳಿ ಅಪ್ಪಳಿಸಿದ್ದು ಮನೆಯೊಂದರ ಮೇಲೆ ಮರ ಉರುಳಿಬಿದ್ದು 84 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಿಬ್ರಾಲ್ಟರ್, ಬೆಲ್ಲೆವಿಲೆ, ಸೌತ್ ರಾಕ್‍ವುಡ್, ನ್ಯೂಪೋರ್ಟ್, ಕ್ಯಾಂಟನ್ ಟೌನ್‍ಶಿಪ್ ಮತ್ತು ಇಂಘಾಮ್ ಹಾಗೂ ಲಿವಿಂಗ್‍ಸ್ಟೋನ್ ನಗರಗಳ ಕೆಲವು ಪ್ರದೇಶಗಳಲ್ಲಿ ಇತರ 6 ಸುಂಟರಗಾಳಿ ಅಬ್ಬರಿಸಿದ್ದು ಬೃಹತ್ ಮರಗಳು ಉರುಳಿಬಿದ್ದು ಹಲವು ಮನೆ, ಕಟ್ಟಡ ಹಾಗೂ ವಾಹನಗಳು ಜಖಂಗೊಂಡಿವೆ. ಸುಂಟರಗಾಳಿಯ ಜತೆ ಭಾರೀ ಮಳೆ ಸುರಿದ ಕಾರಣ ಹಲವೆಡೆ ದಿಢೀರ್ ಪ್ರವಾಹ ಉಂಟಾಗಿದ್ದು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಮೊಟಕುಗೊಂಡಿದೆ. ಪಶ್ಚಿಮ ಮಿಚಿಗನ್‍ನಲ್ಲಿ ನೀರು ನಿಂತಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದ 2 ವಾಹನಗಳು ಮುಖಾಮುಖಿ ಢಿಕ್ಕಿಯಾಗಿ 21 ವರ್ಷದ ಮಹಿಳೆ, 1 ಮತ್ತು 3 ವರ್ಷದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂಘಾಮ್ ಕೌಂಟಿಯಲ್ಲಿ ಸುಮಾರು 25 ವಾಹನಗಳ ನಡುವಿನ ಸರಣಿ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಹಲವರು ತೀವ್ರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸುಂಟರಗಾಳಿಯ ಹೊಡೆತದಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು ವೇಯ್ನ್ ಕೌಂಟಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹಲವೆಡೆ ಚರಂಡಿ ಹಾಗೂ ತ್ಯಾಜ್ಯಪ್ರದೇಶದಿಂದ ಹರಿದುಬಂದ ನೀರು ನದಿಗೆ ಸೇರಿದ ಕಾರಣ ನದಿ ನೀರಿನ ಸಂಪರ್ಕದಿಂದ ದೂರ ಇರುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸಲಹೆ ನೀಡಿದ್ದಾರೆ.