ಕೊಲೊರಾಡೊ ಬಳಿಕ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಮತ್ತೊಂದು ರಾಜ್ಯ ತಡೆ

Update: 2023-12-29 04:27 GMT

Photo: PTI

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದ ಮಿಯಾನ್ ರಾಜ್ಯ ಗುರುವಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಿಪಬ್ಲಿಕನ್ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಸ್ಪರ್ಧೆಯಿಂದ ಅನರ್ಹಗೊಳಿಸಿ ಆದೇಶ ನೀಡಿದೆ. ರಾಜ್ಯದ ಉನ್ನತ ಚುನಾವಣಾ ಅಧಿಕಾರಿಗಳು, 2021ರ ಜನವರಿಯಲ್ಲಿ ನಡೆದ ಯುಎಸ್ ಕ್ಯಾಪಿಟೋಲ್ ದಾಳಿ ಘಟನೆಯಲ್ಲಿ ಶಾಮೀಲಾದ ಆರೋಪದಲ್ಲಿ ಟ್ರಂಪ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದ್ದಾರೆ.

ಮಿಯಾನ್ ರಾಜ್ಯದ ರಕ್ಷಣಾ ಕಾರ್ಯದರ್ಶಿ ಶೆನ್ನಾ ಬೆಲ್ಲೋವ್ಸ್ ಈ ಬಗ್ಗೆ ನೀಡಿದ ಆದೇಶದಲ್ಲಿ, 2021ರ ಜವನರಿ 6ರ ಘಟನಾವಳಿಯು ನಿರ್ಗಮಿತ ಅಧ್ಯಕ್ಷರ ಕೃಪಾಕಟಾಕ್ಷದಲ್ಲಿ, ಅವರ ಗಮನಕ್ಕೆ ಬಂದು, ಅವರ ಬೆಂಬಲದಿಂದ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಅಮೆರಿಕದ ಸಂವಿಧಾನ ನಮ್ಮ ಸರ್ಕಾರದ ಮೂಲದ ಮೇಲೆ ನಡೆದ ದಾಳಿಯನ್ನು ಸಹಿಸುವುದಿಲ್ಲ. ಮಿಯಾನ್ ಕಾನೂನುಗಳು ನನ್ನನ್ನು ಇದರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿ ಮಾಡಿದೆ" ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.

ಈಗಾಗಲೇ ಕೊಲೊರಡೊ ಟ್ರಂಪ್ ಅವರನ್ನು ರಿಪಬ್ಲಿಕನ್ ಪ್ರಾಥಮಿಕ ಹಂತದ ಸ್ಪರ್ಧೆಯಿಂದ ಅನರ್ಹಗೊಳಿಸಿ ತೀರ್ಪು ನೀಡಿತ್ತು. ಸಹಜವಾಗಿಯೇ ಇದನ್ನು ಅಮೆರಿಕದ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.

ಎರಡೂ ಆದೇಶಗಳಲ್ಲಿ ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲೇಖಿಸಲಾಗಿದ್ದು, ಇದು ಸಂವಿಧಾನವನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ಮೊದಲು ಕೈಗೊಂಡಿರುವವರು ಬಳಿಕ ಅದರ ವಿರುದ್ಧದ ದಾಳಿಯಲ್ಲಿ ಶಾಮೀಲಾಗುವುದನ್ನು ತಡೆಯುತ್ತದೆ.

ಬೆಲ್ಲೋಸ್ ತೀರ್ಪನ್ನು ಟ್ರಂಪ್ ಬಣ ಕಟುವಾಗಿ ಟೀಕಿಸಿದ್ದು, ಇದು ಚುನಾವಣೆಯನ್ನು ಕದಿಯುವ ಪ್ರಯತ್ನ ಮತ್ತು ಅಮೆರಿಕದ ಮತದಾರರ ಹಕ್ಕಿನ ನಿರಾಕರಣೆ ಎಂದು ಬಣ್ಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News