ಅಮೆರಿಕಾದ ಮತ್ತೊಂದು ನಗರದಲ್ಲಿ ಜಾತಿ ತಾರತಮ್ಯ ನಿಷೇಧಿಸುವ ಮಸೂದೆ ಅಂಗೀಕಾರ

Update: 2023-10-03 04:33 GMT

Photo credit: X/Kshama Sawant

ಹೊಸದಿಲ್ಲಿ: ಕ್ಯಾಲಿಫೋರ್ನಿಯಾದ ಫ್ರೆಸ್ನೊ ನಗರದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಆ ಮೂಲಕ ಜಾತಿ ತಾರತಮ್ಯ ನಿಷೇಧಿಸುವ ಯುನೈಟೆಡ್ ಸ್ಟೇಟ್ಸ್‌ನ ಎರಡನೇ ನಗರವಾಗಿ ಫ್ರೆಸ್ನೋ ಹೊರಹೊಮ್ಮಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೇರಿಕಾದ ಸಿಯಾಟಲ್ ಜಾತಿ ತಾರತಮ್ಯವನ್ನು ನಿಷೇಧಿಸಿ ಕಾನೂನು ತಂದಿತ್ತು.

ಸೆಪ್ಟೆಂಬರ್ 28, ಗುರುವಾರದಂದು ಫ್ರೆಸ್ನೋ ಸಿಟಿ ಕೌನ್ಸಿಲ್ ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಿದ್ದು, ಇದು ದಕ್ಷಿಣ ಏಷ್ಯಾ ಮೂಲದ ಜನರು ಎದುರಿಸುತ್ತಿರುವ ಜಾತಿ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇಲ್ಲಿ ದಕ್ಷಿಣ ಏಷ್ಯಾದಲ್ಲಿ ಆಚರಣೆಯಲ್ಲಿರುವ ಜಾತಿ ಆಧಾರಿತ ಶ್ರೇಣಿಗಳಿಗೆ ಹೋಲುವ ಕ್ಯಾಸ್ಟಾ ಎಂಬ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಇದೆ.

ಸ್ಥಳೀಯ ಓಕ್ಸಾಕನ್‌ಗಳ ಜೊತೆಗೆ ಹಲವಾರು ಸಿಖ್ಖರು ಕೂಡಾ ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸುವ ಈ ಚಳುವಳಿಯನ್ನು ಮುನ್ನಡೆಸಿದ್ದಾರೆ. ಎರಡು ಸಮುದಾಯಗಳು ಫ್ರೆಸ್ನೊ ಕೌಂಟಿ ಮತ್ತು ಸೆಂಟ್ರಲ್ ವ್ಯಾಲಿಯಲ್ಲಿ ಹಲವು ವರ್ಷಗಳಿಂದ ಕೃಷಿಯನ್ನು ನೆಚ್ಚಿ ಬದುಕು ಸಾಗಿಸುತ್ತಿದ್ದಾರೆ ಎಂದು ‘ಲಾಸ್ ಏಂಜಲೀಸ್ ಟೈಮ್ಸ್’ ವರದಿ ಮಾಡಿದೆ.

"ನಾನು ಮತ್ತೊಮ್ಮೆ ನಮ್ಮ ನಗರದ ಬಗ್ಗೆ ಹೆಮ್ಮೆಪಡುತ್ತೇನೆ” ಎಂದು ಮಸೂದೆ ಅಂಗೀಕಾರಗೊಂಡ ಬಳಿಕ ಫ್ರೆಸ್ನೊ ಸಿಟಿ ಕೌನ್ಸಿಲ್ ಉಪಾಧ್ಯಕ್ಷೆ ಅನ್ನಾಲಿಸಾ ಪೆರಿಯಾ ಹೇಳಿದ್ದಾರೆ. "ತಾರತಮ್ಯವು ರಾತ್ರೋರಾತ್ರಿ ಕೊನೆಗೊಳ್ಳುವುದಿಲ್ಲ ಎಂದು ನಾವು ಒಪ್ಪಿಕೊಂಡರೂ, ನಮ್ಮ ನಗರವು ಜಾತಿ ತಾರತಮ್ಯದ ವಿರುದ್ಧ ನಾಗರಿಕ ಹಕ್ಕುಗಳ ರಕ್ಷಣೆಯನ್ನು ಬಲಪಡಿಸಲು ಈ ತಾರತಮ್ಯ ವಿರೋಧಿ ನೀತಿಯನ್ನು ಅಂಗೀಕರಿಸುವ ಮೂಲಕ ದಿಟ್ಟ ಕ್ರಮ ಕೈಗೊಂಡಿದೆ." ಎಂದವರು ತಿಳಿಸಿದ್ದಾರೆ.

ಮೆಕ್ಸಿಕೋವನ್ನು ಸ್ಪೇನ್ ವಸಾಹತುವನ್ನಾಗಿ ಮಾಡಿದಾಗ, ಸಿಸ್ಟೆಮಾ ಡಿ ಕ್ಯಾಸ್ಟಾಸ್ ಎಂಬ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಇದರ ಪ್ರಕಾರ, ಸ್ಪೇನ್‌ನಲ್ಲಿ ಜನಿಸಿದವರು "ಶುದ್ಧ ಸ್ಪೇನ್ ದೇಶದವರು" ಎಂದು ಪರಿಗಣಿಸಲಾಗುತ್ತದೆ, ನಂತರ ಮೆಕ್ಸಿಕೋದಲ್ಲಿ ಜನಿಸಿದ ಸ್ಪೇನ್ ದೇಶದವರನ್ನು ಶ್ರೇಷ್ಟರೆಂದು ಪರಿಗಣಿಸಲಾಗುತ್ತದೆ. ಸ್ಥಳೀಯ ಜನರಾಗಿರುವ ಓಕ್ಸಾಕನ್‌ಗಳನ್ನು ಕರಿಯರ ಜೊತೆಗೆ ಶ್ರೇಣೀಕೃತ ಕ್ರಮದ ಕೆಳಭಾಗದಲ್ಲಿ ಇರಿಸಲಾಗಿದೆ.

"ವಸಾಹತುಶಾಹಿ ಅವಧಿಯಲ್ಲಿ, ಸ್ಪೇನ್ ದೇಶದವರು ಈ ವ್ಯವಸ್ಥೆಯನ್ನು ಜಾರಿಗೆ ತಂದರು, ಅದು ಭಾರತದ ವ್ಯವಸ್ಥೆಯನ್ನು ಹೋಲುತ್ತದೆ" ಎಂದು ಸ್ಥಳೀಯ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಗ್ಯಾಸ್ಪರ್ ರಿವೇರಾ-ಸಲ್ಗಾಡೊ ಹೇಳಿದ್ದಾರೆಂದು LA ಟೈಮ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News