ರಶ್ಯದಿಂದ ವಾಯುಪ್ರದೇಶ ಉಲ್ಲಂಘನೆ: ಪೋಲ್ಯಾಂಡ್ ಆರೋಪ
Update: 2024-03-24 16:45 GMT
ವಾರ್ಸಾ : ಪಶ್ಚಿಮ ಉಕ್ರೇನ್‍ನ ನಗರವನ್ನು ಗುರಿಯಾಗಿಸಿ ರಶ್ಯ ಪ್ರಯೋಗಿಸಿದ ಕ್ರೂಸ್ ಕ್ಷಿಪಣಿಗಳು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಪೋಲ್ಯಾಂಡ್ ರವಿವಾರ ಹೇಳಿದೆ.
ಶನಿವಾರ ತಡರಾತ್ರಿ ರಶ್ಯ ಪ್ರಯೋಗಿಸಿದ ಕ್ರೂಸ್ ಕ್ಷಿಪಣಿಯೊಂದು ಸುಮಾರು 40 ಸೆಕೆಂಡ್‍ಗಳ ಕಾಲ ಪೋಲ್ಯಾಂಡ್ ವಾಯುಪ್ರದೇಶದ ಮೂಲಕ ಸಾಗಿದೆ. ಲುಬ್ಲಿನ್ ಪ್ರಾಂತದ ಒಸೆರ್ಡಾ ಗ್ರಾಮದ ಮೇಲಿಂದ ಈ ಕ್ರೂಸ್ ಕ್ಷಿಪಣಿ ಹಾರಿಹೋಗಿದೆ ಎಂದು ಪೋಲ್ಯಾಂಡ್‍ನ ಸೇನಾಪಡೆ ಹೇಳಿದೆ. ಕ್ಷಿಪಣಿಯ ಮೇಲೆ ತನ್ನ ಮಿಲಿಟರಿ ರೇಡಾರ್ ನಿಗಾ ವಹಿಸಿತ್ತು. ಅಲ್ಲದೆ ಉಕ್ರೇನ್ ಭಾಗದಲ್ಲಿನ ಪರಿಸ್ಥಿತಿಯ ಮೇಲೆ ನಿರಂತರ ಗಮನ ವಹಿಸಲಾಗಿದೆ ಎಂದು ಪೋಲ್ಯಾಂಡ್ ಸೇನೆ ಹೇಳಿದೆ.