ನವಾಝ್ ಷರೀಫ್ ಶಿಕ್ಷೆ ಅಮಾನತು

Update: 2023-10-24 17:37 GMT

Photo : twitter/NawazSharifMNS

ಇಸ್ಲಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಗೆ ವಿಧಿಸಿದ್ದ ಶಿಕ್ಷೆಯನ್ನು ಪಂಜಾಬ್ ಪ್ರಾಂತದ ಉಸ್ತುವಾರಿ ಸರಕಾರ ಅಮಾನತುಗೊಳಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ಮಂಗಳವಾರ ವರದಿ ಮಾಡಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್(ಸಿಪಿಸಿ)ನ ಸೆಕ್ಷನ್ 401ರಡಿ ಇರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿಕೊಂಡು ಪಂಜಾಬ್ ನ ಉಸ್ತುವಾರಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಸೆಕ್ಷನ್ನಡಿ ಯಾವುದೇ ಅಪರಾಧಿಯನ್ನು ಕ್ಷಮಿಸಲೂ ಅಧಿಕಾರವಿದೆ ಎಂದು ಮಾಹಿತಿ ಸಚಿವ ಅಮೀರ್ ಮೀರ್ ಸಚಿವ ಸಂಪುಟದ ನಿರ್ಧಾರವನ್ನು ದೃಢಪಡಿಸಿದ್ದಾರೆ. ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ, ಆದರೆ ಅಂತಿಮ ನಿರ್ಧಾರವನ್ನು ನ್ಯಾಯಾಲಯ ಕೈಗೊಳ್ಳಲಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಪಿಎಂಎಲ್-ಎನ್ ಪರಮೋಚ್ಛ ಮುಖಂಡ ನವಾಝ್ ಷರೀಫ್ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲು ವಿಶೇಷ ನ್ಯಾಯಾಲಯ ಹಾಗೂ ಇಸ್ಲಮಾಬಾದ್ ಹೈಕೋರ್ಟ್ ನ ಎದುರು ಮಂಗಳವಾರ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿತ್ತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವೂ ನ್ಯಾಯಾಲಯದ ಆವರಣದಲ್ಲಿ ಕೂಲಂಕುಷ ತಪಾಸಣೆ ನಡೆಸಿತ್ತು. ಬಳಿಕ ನ್ಯಾಯಾಲಯದಲ್ಲಿ ಹಾಜರಾದ ಷರೀಫ್ ಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News