ಅಮೆರಿಕ: ಭಾರತೀಯ ಮೂಲದ ವ್ಯಕ್ತಿಗೆ 27 ವರ್ಷ ಜೈಲು ಶಿಕ್ಷೆ
ವಾಷಿಂಗ್ಟನ್ : ಅಮೆರಿಕದಲ್ಲಿ ಬೆಳಕಿಗೆ ಬಂದ 463 ದಶಲಕ್ಷ ಡಾಲರ್ ಮೊತ್ತದ ಆನುವಂಶಿಕ(ವಂಶವಾಹಿ) ಪರೀಕ್ಷೆ ಹಗರಣದಲ್ಲಿ ಭಾರತೀಯ ಮೂಲದ ಪ್ರಯೋಗಾಲಯ ಮಾಲಿಕ ಮಿನಾಲ್ ಪಟೇಲ್ಗೆ 27 ವರ್ಷ ಜೈಲುಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಜಾರ್ಜಿಯಾ ರಾಜ್ಯದಲ್ಲಿ ಲ್ಯಾಬ್ ಸೊಲ್ಯುಷನ್ಸ್ ಎಂಬ ಪ್ರಯೋಗಾಲಯ ಹೊಂದಿರುವ ಪಟೇಲ್, ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ಆನುವಂಶಿಕ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು ನಡೆಸಿ ಅವರಿಂದ ಶುಲ್ಕ ಪಡೆಯುವ ಜಾಲದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿದ್ದರು. ಅಮೆರಿಕದ ರಾಷ್ಟ್ರೀಯ ವಿಮಾಯೋಜನೆ `ಮೆಡಿಕೇರ್'ನ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಅಗತ್ಯವಿಲ್ಲದಿದ್ದರೂ ಕ್ಯಾನ್ಸರ್ ವಂಶವಾಹಿ ಪರೀಕ್ಷೆ ಇತ್ಯಾದಿಗಳನ್ನು ನಡೆಸುವಂತೆ ಅವರಿಗೆ ಟೆಲಿಮಾರ್ಕೆಟಿಂಗ್ ಕರೆಯ ಮೂಲಕ ಸಲಹೆ ನೀಡಲಾಗುತ್ತಿತ್ತು. ಬಳಿಕ ರೋಗಿಗಳ ಬ್ರೋಕರ್ ಗೆ ಲಂಚ ನೀಡಿ, ಕ್ಯಾನ್ಸರ್ ವಂಶವಾಹಿ ಪರೀಕ್ಷೆಯನ್ನು ನಡೆಸುವ ಬಗ್ಗೆ ಅಧಿಕೃತ ವೈದ್ಯರ ಆದೇಶಪತ್ರವನ್ನು ಪಡೆಯಲಾಗುತ್ತಿತ್ತು. ನಂತರ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ವರದಿ ತಯಾರಿಸಿ, `ಮೆಡಿಕೇರ್' ಯೋಜನೆಯಿಂದ ಹಣ ಪಡೆಯುವುದು ಪಟೇಲ್ನ ಕಾರ್ಯತಂತ್ರವಾಗಿತ್ತು ಎಂದು ದೂರು ಸಲ್ಲಿಸಲಾಗಿತ್ತು. 2016ರ ಜುಲೈಯಿಂದ 2019ರ ಆಗಸ್ಟ್ವರೆಗೆ `ಲ್ಯಾಬ್ಸೊಲ್ಯೂಷನ್ಸ್' ಸಂಸ್ಥೆಯು ಮೆಡಿಕೇರ್ಗೆ 463 ದಶಲಕ್ಷ ಡಾಲರ್ ಮೊತ್ತ ಮರುಪಾವತಿಗೆ ಮನವಿ ಸಲ್ಲಿಸಿದ್ದು ಇದರಲ್ಲಿ 187 ದಶಲಕ್ಷ ಡಾಲರ್ ಹಣವನ್ನು ಪಾವತಿಸಲಾಗಿದೆ. ಈ ಅವಧಿಯಲ್ಲಿ ಪಟೇಲ್ ವೈಯಕ್ತಿಕವಾಗಿ 21 ದಶಲಕ್ಷ ಡಾಲರ್ ಹಣ ಸಂಪಾದಿಸಿದ್ದ ಎಂದು ವರದಿಯಾಗಿದೆ.
ಇದೀಗ ಪಟೇಲ್ಗೆ 27 ವರ್ಷ ಜೈಲುಶಿಕ್ಷೆ ವಿಧಿಸಲಾಗಿದ್ದು ಆತ ವಂಚಿಸಿದ ಹಣವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದ ನ್ಯಾಯಾಂಗ ಕಲಾಪ ಆಗಸ್ಟ್ 25ಕ್ಕೆ ನಿಗದಿಯಾಗಿದೆ ಎಂದು ವರದಿ ಹೇಳಿದೆ.