ಅಮೆರಿಕ: ಭಾರತೀಯ ವಿದ್ಯಾರ್ಥಿಯನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ

Update: 2023-12-01 17:50 GMT

ವಾಷಿಂಗ್ಟನ್ : ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಹಲವು ತಿಂಗಳವರೆಗೆ ಮನೆಯಲ್ಲಿ ಕೂಡಿಹಾಕಿ, ನಿರಂತರ ಥಳಿಸಿ ಅಕ್ಕಪಕ್ಕದ ಮೂವರು ಭಾರತೀಯರ ಮನೆಗೆಲಸಕ್ಕೆ ಬಲವಂತಗೊಳಿಸಿದ ಪ್ರಕರಣ ಅಮೆರಿಕದ ಮಿಸೌರಿ ರಾಜ್ಯದಲ್ಲಿ ವರದಿಯಾಗಿದೆ.

ಇದು ಮಾನವ ಕಳ್ಳಸಾಗಣೆ ಪ್ರಕರಣವಾಗಿರಬಹುದು ಎಂದು ಶಂಕಿಸಿರುವ ಪೊಲೀಸರು ಆರೋಪಿಗಳಾದ ವೆಂಕಟೇಶ್ ಆರ್. ಸಟ್ಟಾರು, ಶ್ರವಣ್ ವರ್ಮ ಪೆನುಮೆಫ್ಚ ಮತ್ತು ನಿಕಿಲ್ ಪೆನ್ಮಾತ್ಸ ಎಂಬವರನ್ನು ಬಂಧಿಸಿದ್ದಾರೆ. ಮಿಸೌರಿಯ ಸೈಂಟ್ ಚಾರ್ಲ್ಸ್ ಕೌಂಟಿಯಲ್ಲಿ ಈ ಪ್ರಕರಣ ವರದಿಯಾಗಿದೆ.

20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಪಹರಿಸಿದ್ದ ಅಕ್ಕಪಕ್ಕದ ಮನೆ ನಿವಾಸಿಗಳಾದ ಈ ಮೂವರು ವಿದ್ಯಾರ್ಥಿಯನ್ನು ಮನೆಯ ತಳ ಅಂತಸ್ತಿನಲ್ಲಿ ಕೂಡಿಹಾಕಿ ಆತನಿಂದ ಮೂರೂ ಮನೆಯ ಕೆಲಸವನ್ನು ಮಾಡಿಸುತ್ತಿದ್ದರು ಮತ್ತು ಥಳಿಸುತ್ತಿದ್ದರು. ವಿದ್ಯಾರ್ಥಿಯ ದಯನೀಯ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ದಾಳಿ ಮಾಡಿ ಮೂವರೂ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿಯ ಮೂಳೆ ಮುರಿದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಅತ್ಯಂತ ಅಮಾನವೀಯ ಪ್ರಕರಣವಾಗಿದ್ದು ಆರೋಪಿಗಳು ಭಾರತದಿಂದ ಹಲವರನ್ನು ಅಕ್ರಮವಾಗಿ ಅಮೆರಿಕಕ್ಕೆ ಕರೆತಂದು ಬಲವಂತದ ದುಡಿಮೆಗೆ ಒಳಪಡಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News