ಫೆಲೆಸ್ತೀನೀಯರ ಹತ್ಯೆಗೆ ಅಮೆರಿಕ ಖಂಡನೆ

Update: 2023-08-07 17:10 GMT

ವಾಷಿಂಗ್ಟನ್: ಶಂಕಿತ ಯೆಹೂದಿ ವಸಾಹತುಗಾರರಿಂದ ಫೆಲೆಸ್ತೀನ್ ಪ್ರಜೆಯ ಹತ್ಯೆಯನ್ನು ಭಯೋತ್ಪಾದನೆ ಎಂದು ಖಂಡಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ, ಈ ಹತ್ಯೆಗೆ ಹೊಣೆಗಾರರನ್ನು ಗುರುತಿಸಬೇಕು ಎಂದು ಆಗ್ರಹಿಸಿದೆ.

ಇಸ್ರೇಲ್ನ ಕಟ್ಟಾ ಬಲಪಂಥೀಯ ಸರಕಾರದಡಿ ಪಶ್ಚಿಮದಂಡೆಯಲ್ಲಿ ಹಿಂಸಾಚಾರ ಉಲ್ಬಣಿಸುತ್ತಿರುವ ಬಗ್ಗೆ ಅಮೆರಿಕದ ಹತಾಶೆಯನ್ನು ಇದು ಸಂಕೇತಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ನ ವಸಾಹತುಗಾರರ ಗುಂಪೊಂದು ರವಿವಾರ ಪಶ್ಚಿಮ ದಂಡೆಯ ಬುರ್ಖಾ ಗ್ರಾಮದಲ್ಲಿ ಕಲ್ಲೆಸೆತ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿತ್ತು. ಇದನ್ನು ವಿರೋಧಿಸಿದ ಸ್ಥಳೀಯರ ಮೇಲೆ ಗುಂಡು ಹಾರಿಸಿದಾಗ 19 ವರ್ಷದ ಫೆಲೆಸ್ತೀನ್ ಯುವಕ ಮೃತಪಟ್ಟಿದ್ದ. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಮೆರಿಕ, ಇದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಖಂಡಿಸಿದೆ.

ಈ ಮಧ್ಯೆ, ರವಿವಾರ ಪಶ್ಚಿಮ ದಂಡೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಇಸ್ರೇಲಿ ಸೇನೆಯ ಗುಂಡೇಟಿಗೆ ಮೂವರು ಫೆಲೆಸ್ತೀನೀಯರು ಬಲಿಯಾಗಿದ್ದಾರೆ. ಈ ಹತ್ಯೆಗೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪು ಎಚ್ಚರಿಕೆ ನೀಡಿದೆ. ಹಿಂಸಾಚಾರ ಉಲ್ಬಣಿಸಿರುವ ನಡುವೆಯೇ, ಅಮೆರಿಕ ಸಂಸತ್ನ ಡೆಮೊಕ್ರಾಟಿಕ್ ಸಂಸದರ ತಂಡವೊಂದು ಈ ವಾರದಲ್ಲಿ ಇಸ್ರೇಲ್ ಹಾಗೂ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಆಕ್ರಮಿತ ಪ್ರದೇಶಕ್ಕೆ ಭೇಟಿ ನೀಡಲಿದೆ ಹಾಗೂ `ಎರಡು ದೇಶ' ಪರಿಹಾರ ಸೂತ್ರ ಮತ್ತು ಇಸ್ರೇಲ್ನ ನ್ಯಾಯಾಂಗ ಸುಧಾರಣೆ ವಿಷಯದ ಬಗ್ಗೆ ಚರ್ಚೆ ನಡೆಸಲಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News