ಅಮೆರಿಕ ಪ್ರಾಮಾಣಿಕತೆ ಪ್ರದರ್ಶಿಸಬೇಕು: ಚೀನಾ ಆಗ್ರಹ
ಬೀಜಿಂಗ್: ಈ ವರ್ಷಾಂತ್ಯದಲ್ಲಿ ಅಧ್ಯಕ್ಷ ಕ್ಸಿಜಿಂಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ಸಭೆ ನಡೆಯುವುದು ಅಮೆರಿಕ ತೋರಿಸುವ ಪ್ರಾಮಾಣಿಕತೆಯನ್ನು ಅವಲಂಬಿಸಿದೆ ಎಂದು ಚೀನಾದ ರಾಷ್ಟ್ರೀಯ ಭದ್ರತಾ ಸಚಿವಾಲಯ ಹೇಳಿದೆ.
ನವೆಂಬರ್‍ನಲ್ಲಿ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ನಡೆಯುವ ಏಶ್ಯಾ ಪೆಸಿಫಿಕ್ ಇಕನಾಮಿಕ್ ಕೋಆಪರೇಷನ್(ಅಪೆಕ್) ಶೃಂಗಸಭೆಯ ನೇಪಥ್ಯದಲ್ಲಿ ಜಿಂಪಿಂಗ್-ಬೈಡನ್ ನಡುವೆ ಮಾತುತಕೆ ನಡೆಯುವ ನಿರೀಕ್ಷೆಯಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯ `ಉಭಯ ದೇಶಗಳ ನಡುವಿನ ಯಾವುದೇ ಸಭೆಯು ಅಮೆರಿಕ ತೋರಿಸುವ ಪ್ರಾಮಾಣಿಕತೆಯನ್ನು ಅವಲಂಬಿಸಿದೆ' ಎಂದಿದೆ.
ಬೈಡನ್ ಆಡಳಿತವು ಚೀನಾದ ವಿಷಯದಲ್ಲಿ ದ್ವಂದ್ವ ಸ್ವರೂಪದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು ಚೀನಾದೊಂದಿಗೆ ಸ್ಪರ್ಧೆಯನ್ನು ಆಹ್ವಾನಿಸುವ ಜತೆಗೆ ಸ್ಪರ್ಧೆಯನ್ನು ನಿಯಂತ್ರಿಸಲು ಬಯಸುತ್ತಿದೆ. ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ ಅಮೆರಿಕದ ಅಧಿಕಾರಿಗಳು ಚೀನಾದ ಅಭಿವೃದ್ಧಿಯನ್ನು ನಿಗ್ರಹಿಸುವ ಉದ್ದೇಶವನ್ನು ಅಮೆರಿಕ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ತೈವಾನ್‍ಗೆ ಶಸ್ತ್ರಾಸ್ತ್ರ ಮಾರಾಟ, ಮಿಲಿಟರಿ ಉದ್ದೇಶದ ಆರ್ಥಿಕ ನೆರವನ್ನು ಒದಗಿಸುವ ಪ್ರಸ್ತಾವನೆಗೆ ಅಮೆರಿಕ ಸರಕಾರ ಅನುಮೋದನೆ ನೀಡಿದೆ.
ಅಲ್ಲದೆ ವಿನಾಕಾರಣ ಟಿಬೆಟ್, ದಕ್ಷಿಣ ಚೀನಾ ಸಮುದ್ರದ ವಿಷಯಗಳನ್ನು ಕೆದಕುತ್ತಾ ಚೀನಾದ ಅರ್ಥವ್ಯವಸ್ಥೆಯನ್ನು ಬಹಿರಂಗವಾಗಿ ಟೀಕಿಸುತ್ತಿದೆ. ಇಲ್ಲಿ ಪ್ರಾಮಾಣಿಕತೆಯ ಕೊರತೆ ಕಾಣುತ್ತಿದೆ' ಎಂದು ಇಲಾಖೆ ಹೇಳಿದೆ.
ಅಮೆರಿಕದ ನಯವಾದ ಮಾತುಗಳ ಬಲೆಗೆ ಬಿದ್ದು ಚೀನಾ ಎಂದಿಗೂ ತನ್ನ ನಿಲುವನ್ನು ಬಿಟ್ಟುಕೊಡುವುದಿಲ್ಲ. ಅಮೆರಿಕದ ವಿವಿಧ ರೀತಿಯ ಅಡೆತಡೆ, ನಿಯಂತ್ರಣ ಮತ್ತು ನಿಗ್ರಹವು ಚೀನಾವನ್ನು ಹೆಚ್ಚು ಧೈರ್ಯಶಾಲಿ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಹೇಳಿಕೆ ತಿಳಿಸಿದೆ.