ಫೆಲೆಸ್ತೀನ್ ಮುಸ್ಲಿಮರ ಪುಟಿದೆದ್ದು ನಿಲ್ಲುವ ಗುಣವನ್ನು ಅರಿಯಲು ಕುರ್ ಆನ್ ಓದುತ್ತಿರುವ ಅಮೆರಿಕದ ಯುವ ಜನತೆ!

Update: 2023-11-21 17:24 GMT

Photograph: Courtesy Megan B Rice

ವಾಷಿಂಗ್ಟನ್: ಮೆಗಾನ್ ಬಿ ರೈಸ್ ಪುಸ್ತಕಗಳನ್ನು ಇಷ್ಟಪಡುತ್ತಾರೆ. ಆಕೆ ತ್ವರಿತ ಸಂದೇಶ ವೇದಿಕೆಯಾದ ಡಿಸ್ಕಾರ್ಡ್ ನಲ್ಲಿ ಪ್ರಣಯ ಕಾದಂಬರಿ ಕ್ಲಬ್ ಅನ್ನು ಪ್ರಾರಂಭಿಸಿದ್ದರು. ಟಿಕ್ ಟಾಕ್ ನಲ್ಲಿ ಪುಸ್ತಕಗಳ ವಿಮರ್ಶೆಯನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ, ಚಿಕಾಗೊದಲ್ಲಿ ನೆಲೆಸಿರುವ 34 ವರ್ಷದ ರೈಸ್, ಕಳೆದ ಒಂದು ತಿಂಗಳಿನಿಂದ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಾಝಾದಲ್ಲಿ ಸೃಷ್ಟಿಯಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಮಾತನಾಡಲು ಬಳಸುತ್ತಿದ್ದಾರೆ.

“ತಾವು ಎಲ್ಲವನ್ನೂ ಕಳೆದುಕೊಂಡಿದ್ದರೂ, ದೇವರಿಗೆ ಕೃತಜ್ಞತೆ ಅರ್ಪಿಸುವ ಗುಣವನ್ನು ತಮ್ಮ ಮನದಲ್ಲಿ ಉಳಿಸಿಕೊಂಡಿರುವ ಫೆಲೆಸ್ತೀನ್ ಜನರ ದೃಢವಾದ ಶ್ರದ್ಧೆಯ ಕುರಿತು ನಾನು ಮಾತನಾಡಲು ಬಯಸುತ್ತೇನೆ” ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದಾರೆ.

ಶ್ರದ್ಧೆಯ ಕುರಿತು ಮತ್ತಷ್ಟು ವಿವರಗಳನ್ನು ಒದಗಿಸುವ ಇಸ್ಲಾಂನ ಮುಖ್ಯ ಧಾರ್ಮಿಕ ಗ್ರಂಥವಾದ ಕುರ್ ಆನ್ ಅನ್ನು ಓದಲು ನಿಮಗೆ ಆಸಕ್ತಿ ಹುಟ್ಟಬಹುದು ಎಂದು ಕೆಲವು ಮುಸ್ಲಿಮರು ಆಕೆಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಂದಿಗೂ ಧಾರ್ಮಿಕ ವ್ಯಕ್ತಿಯಾಗಿ ಬೆಳೆದಿರದ ರೈಸ್, ತಮ್ಮ ಡಿಸ್ಕಾರ್ಡ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ “World Religion Book Club” (‘ವಿಶ್ವ ಧಾರ್ಮಿಕ ಗ್ರಂಥ ಕ್ಲಬ್’) ಅನ್ನು ಸಂಘಟಿಸಿ, ತಮ್ಮೊಂದಿಗೆ ಎಲ್ಲ ಹಿನ್ನೆಲೆಯ ಜನರು ಕುರ್ ಆನ್ ಅನ್ನು ಅಧ್ಯಯನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ರೈಸ್ ಕುರ್ ಆನ್ ಅನ್ನು ಹೆಚ್ಚು ಓದತೊಡಗಿದಂತೆಲ್ಲ, ಆ ಗ್ರಂಥದಲ್ಲಿನ ಸಾರವು ಆಕೆಯನ್ನು ಸೆಳೆದಿದೆ. ಆಕೆಗೆ ಕುರ್ ಆನ್ ಮೋಸದ ವ್ಯಾಪಾರ ವಿರೋಧಿ, ದೌರ್ಜನ್ಯದ ವಿರೋಧಿಯಾಗಿರುವುದು ಹಾಗೂ ಮಹಿಳಾಪರವಾಗಿರುವುದು ಗಮನಕ್ಕೆ ಬಂದಿದೆ. ಅಧ್ಯಯನ ಆರಂಭಿಸಿದ ಕೇವಲ ಒಂದೇ ತಿಂಗಳಲ್ಲಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿರುವ ರೈಸ್, ಮುಸ್ಲಿಂ ಆಗಿದ್ದಾರೆ, ಹಿಜಾಬ್ ಧರಿಸಲು ಆರಂಭಿಸಿದ್ದಾರೆ.

ಆದರೆ, ಕುರ್ ಆನ್ ಅನ್ನು ತಾವೊಬ್ಬರೇ ಅನುಭವಿಸುವುದು ರೈಸ್ ಗೆ ಬೇಕಿಲ್ಲ. ದೀರ್ಘಕಾಲದಿಂದ ಪಾಶ್ಚಿಮಾತ್ಯ ಮಾಧ್ಯಮಗಳಿಂದ ಕೆಟ್ಟದಾಗಿ ಚಿತ್ರಿಸಲ್ಪಟ್ಟಿರುವ ಹಾಗೂ ಗಾಝಾದಲ್ಲಿನ ಹಲವಾರು ಮುಸ್ಲಿಮರು ಈಗಲೂ ಒಗ್ಗಟ್ಟು ಪ್ರದರ್ಶಿಸಲು ಕಾರಣವಾಗಿರುವ ಧರ್ಮದ ಕುರಿತು ಸರಿಯಾಗಿ ಗ್ರಹಿಸಲು ಹಲವಾರು ಯುವ ಜನರು ಕುರ್ ಆನ್ ಗ್ರಂಥವನ್ನು ಅಧ್ಯಯನ ಮಾಡುತ್ತಿದ್ದಾರೆ. ಸುಮಾರು 19 ಲಕ್ಷ ಫಾಲೋವರ್ಸ್ ಹೊಂದಿರುವ ‘quran book club’ ಎಂಬ ಹ್ಯಾಶ್ ಟ್ಯಾಗ್ ನ ವಿಡಿಯೊಗಳಲ್ಲಿ ಬಳಕೆದಾರರು ನೂತನವಾಗಿ ಖರೀದಿಸಿರುವ ಕುರ್ ಆನ್ ಅನ್ನು ಖರೀದಿಸಿ, ಮೊದಲ ಬಾರಿಗೆ ಓದುತ್ತಿರುವುದನ್ನು ಕಾಣಬಹುದಾಗಿದೆ.

ಉಳಿದವರು ಉಚಿತ ಆನ್ ಲೈನ್ ಆವೃತ್ತಿಯ ಮೂಲಕ ಅಥವಾ ಕೆಲವರು ತಾವು ಕೆಲಸಕ್ಕೆ ತೆರಳುವಾಗ ಯಾರಾದರೂ ಪಠಿಸಿರುವುದನ್ನು ಆಲಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಟಿಕ್ ಟಾಕ್ ನಲ್ಲಿ ಕುರ್ ಆನ್ ಪಠಣ ಮಾಡುತ್ತಿರುವವರೆಲ್ಲ ಮಹಿಳೆಯರಲ್ಲ. ಆದರೆ, #BookTok ಜಾಗದಲ್ಲಿನ ಉಪ ಸಮುದಾಯಕ್ಕೆ ಸೇರಿರುವವರ ಪೈಕಿ ಬಹುತೇಕ ಮಹಿಳೆಯರೇ ಕುರ್ ಆನ್ ಗ್ರಂಥದ ಬಗ್ಗೆ ಚರ್ಚಿಸುತ್ತಾರೆ.

ಝರೀನಾ ಗ್ರೇವಲ್ ಇಸ್ಲಾಂ ಧರ್ಮ ಗ್ರಂಥ ಹಾಗೂ ಅಮೆರಿಕಾ ಸಂಸ್ಕೃತಿಯಲ್ಲಿನ ಧಾರ್ಮಿಕ ಸಹಿಷ್ಣುತೆ ಕುರಿತು ಒಂದು ಕೃತಿಯನ್ನು ರಚಿಸುತ್ತಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿನ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಟಿಕ್ ಟಾಕ್ ನಲ್ಲಿನ ಈ ಆಸಕ್ತಿಯು ಸಂಪೂರ್ಣ ಹೊಸತೇನೂ ಅಲ್ಲ ಎಂದು ಅವರು ಹೇಳುತ್ತಾರೆ.

9/11 ದಾಳಿಯ ನಂತರ, ಕುರ್ ಆನ್ ಏಕಾಏಕಿ ಅತಿ ಹೆಚ್ಚು ಮಾರಾಟವಾಗುವ ಗ್ರಂಥವಾಗಿತ್ತು. ಆ ಸಂದರ್ಭದಲ್ಲಿ ಹಲವಾರು ಅಮೆರಿಕನ್ನರು ಇಸ್ಲಾಂ ಮೂಲಭೂತವಾಗಿಯೇ ಹಿಂಸಾ ಧರ್ಮ ಎಂಬುದು ತಮ್ಮ ಪಕ್ಷಪಾತಿ ಧೋರಣೆ ಎಂಬುದನ್ನು ದೃಢಪಡಿಸಿಕೊಳ್ಳಲು ಕುರ್ ಆನ್ ಅನ್ನು ಖರೀದಿಸಿದ್ದರು. “ಆದರೆ, ಈ ಹೊತ್ತಿನ ವ್ಯತ್ಯಾಸವೆಂದರೆ, ಜನರು ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯ ಕುರಿತು ಅರ್ಥ ಮಾಡಿಕೊಳ್ಳಲು ಕುರ್ ಆನ್ ಅತ್ತ ಮುಖ ಮಾಡಿಲ್ಲ. ಬದಲಿಗೆ ಫೆಲೆಸ್ತೀನಿನ ಮುಸ್ಲಿಮರ ಇಷ್ಟು ಸಂಕಷ್ಟದ ಸಮಯದಲ್ಲೂ ಪುಟಿದೆದ್ದು ನಿಲ್ಲುವ ಗುಣವನ್ನು ಅರ್ಥಮಾಡಿಕೊಳ್ಳಲು ಕುರ್ ಆನ್ ನತ್ತ ಮುಖ ಮಾಡಿದ್ದಾರೆ” ಎಂದು ಗ್ರೇವಲ್ ಹೇಳುತ್ತಾರೆ.

ಇದೇ ಕಾರಣಕ್ಕೆ ಫ್ಲೋರಿಡಾದಲ್ಲಿನ ಟಂಪಾದ 35 ವರ್ಷ ವಯಸ್ಸಿನ ನೆಫೆರ್ಟರಿ ಮೂನ್ ತಮ್ಮ ಪತಿಯ ಕೈಯಿಂದ ಕುರ್ ಆನ್ ಅನ್ನು ಪಡೆದಿದ್ದಾರೆ. ತಮ್ಮನ್ನು ತಾವು ಆಧ್ಯಾತ್ಮಿಕವಾದಿಯಾದರೂ ಧಾರ್ಮಿಕ ವ್ಯಕ್ತಿಯಲ್ಲ ಎಂದು ವ್ಯಾಖ್ಯಾನಿಸಿಕೊಳ್ಳುವ ಮೂನ್, ತನ್ನ ಪತಿ ಮುಸ್ಲಿಂ ಧರ್ಮವನ್ನು ಪಾಲಿಸುತ್ತಿಲ್ಲ ಎಂದು ಹೇಳುತ್ತಾರೆ. “ಅವರ ಮುಖದಲ್ಲಿ ಸಾವಿನ ಭೀತಿ ಕಾಣಿಸಿಕೊಂಡಾಗ, ಯಾವ ಶಕ್ತಿ ಅವರನ್ನು ಅಲ್ಲಾಹ್ ಎಂದು ಕರೆಯುವಂತೆ ಮಾಡುತ್ತದೆ ಎಂಬ ಬಗ್ಗೆ ನನಗೆ ಕುತೂಹಲವಿದೆ. ಒಂದೊಂದೇ ಚರಣವನ್ನು ಓದುತ್ತಿದ್ದಂತೆಯೆ ಅವು ನನ್ನಲ್ಲಿ ಮಾರ್ದನಿಸತೊಡಗಿದವು. ನಾನು ಆ ಬಗೆಯಲ್ಲಿ ಅದಕ್ಕೆ ಭಾವನಾತ್ಮಕವಾಗಿ ಅಂಟಿಕೊಂಡು ಬಿಟ್ಟೆ”ಎನ್ನುತ್ತಾರೆ ಮೂನ್. ಹೀಗೆ ಅಧ್ಯಯನದ ಬಳಿಕ ಅವರೂ ಇಸ್ಲಾಂ ಧರ್ಮ ಸ್ವೀಕರಿಸಿದರು.

“ನಾನದನ್ನು ವಿವರಿಸಲಾರೆ. ಆದರೆ, ಕುರ್ ಆನ್ ಅನ್ನು ಪಠಿಸುವುದರಿಂದ ಒಂದು ಬಗೆಯ ಶಾಂತಿ ಮನೆ ಮಾಡುತ್ತದೆ”ಎನ್ನುತ್ತಾರವರು. “ನನಗೆ ಹಗುರವಾದಂತೆ ಭಾಸವಾಗುತ್ತದೆ. ನನಗಾಗಿ ಯಾವಾಗಲೂ ಏನೋ ಇದ್ದು, ಅದನ್ನು ನನಗೆ ಮರಳಿಸಲು ಕಾಯುತ್ತಿರುವಂತೆ ನನಗೆ ಅನಿಸುತ್ತದೆ” ಎಂದೂ ಹೇಳುತ್ತಾರೆ ಮೂನ್ .

ಮಿಶಾ ಯೂಸೆಫ್ ಎಂಬ ಪಾಕಿಸ್ತಾನ ಮೂಲದ ಅಮೆರಿಕಾ ಬರಹಗಾರ್ತಿ ಹಾಗೂ ಪಾಡ್ ಕಾಸ್ಟ್ ನಿರೂಪಕಿಯು ಕುರ್ ಆನ್ ನ ವ್ಯಾಖ್ಯಾನಗಳನ್ನು ಓದುತ್ತಾರೆ. ಅಲ್ಲದೇ 2020ರಿಂದ ಇನ್ಸ್ಟಾಗ್ರಾಮ್ ನಲ್ಲಿ ಕುರ್ ಆನ್ ಬುಕ್ ಕ್ಲಬ್ ಅನ್ನೂ ಸ್ವಂತವಾಗಿ ನಡೆಸುತ್ತಿದ್ದಾರೆ. ಕುರ್ ಆನ್ ಗ್ರಂಥದಲ್ಲಿನ ಕೆಲವು ವಿಚಾರಗಳು ಯುವಜನರ ಮೌಲ್ಯ ಹಾಗೂ ಎಡಪಂಥೀಯ ಅಮೆರಿಕನ್ನರೊಂದಿಗೆ ಮಿಳಿತಗೊಳ್ಳುತ್ತವೆ ಎನ್ನುತ್ತಾರೆ.

“ಕುರ್ ಆನ್ ತುಂಬಾ ಪ್ರಕೃತಿ ರೂಪಕಗಳೇ ತುಂಬಿದ್ದು, ಅದು ನಿಮ್ಮನ್ನು ಪರಿಸರವಾದಿಯನ್ನಾಗಿಸಲು ಉತ್ತೇಜಿಸುತ್ತದೆ”ಎನ್ನುತ್ತಾರೆ ಯೂಸೆಫ್. “ಕುರ್ ಆನ್ ಮೋಸದ ವ್ಯಾಪಾರ ವಿರೋಧಿ ಧೋರಣೆಯನ್ನೂ ಹೇಳಿದ್ದು , ನಾವೆಲ್ಲರೂ ಭೂಮಿಯ ಪರಿಚಾರಕರಾಗಿದ್ದೇವೆ ಹಾಗೂ ಜಗತ್ತಿನೊಂದಿಗೆ ಅಥವಾ ನಮ್ಮ ಸಹ ಮಾನವರೊಂದಿಗೆ ಲಾಭಕೋರ ಸಂಬಂಧಗಳನ್ನು ಬೆಳೆಸಿಕೊಳ್ಳಬಾರದು ಎಂದು ಹೇಳುತ್ತದೆ” ಎಂದು ಅವರು ಪ್ರತಿಪಾದಿಸುತ್ತಾರೆ.

ಕುರ್ ಆನ್ ಪ್ರಕಾರ, ದೇವರ ಕಣ್ಣಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರೂ ಸಮಾನರು ಹಾಗೂ ಕುರ್ ಆನ್ ಗ್ರಂಥದ ವ್ಯಾಖ್ಯಾನಗಳು ಸ್ತ್ರೀವಾದಿ ಸಿದ್ಧಾಂತಗಳ ಬೆನ್ನಿಗೆ ನಿಲ್ಲುತ್ತವೆ ಎನ್ನುತ್ತಾರೆ ರೈಸ್ ಹಾಗೂ ಇನ್ನಿತರ ಇಸ್ಲಾಂ ಧರ್ಮ ಸ್ವೀಕರಿಸಿದವರು. ಅಲ್ಲದೆ ಕುರ್ ಆನ್ ನಲ್ಲಿ ಬಿಗ್ ಬ್ಯಾಂಗ್ ಹಾಗೂ ಇನ್ನಿತರ ಸಿದ್ಧಾಂತಗಳನ್ನು ಒಳಗೊಂಡಿರುವ ವಾಕ್ಯಗಳು ಜೀವ ಸೃಷ್ಟಿಯ ಕುರಿತು ವೈಜ್ಞಾನಿಕ ವಿವರವನ್ನೂ ನೀಡುತ್ತವೆ ಎನ್ನುತ್ತಾರೆ ಅವರು .

“ನಾವೆಲ್ಲ ಸಾಮಾನ್ಯವಾಗಿ ವಿಜ್ಞಾನದ ವಿರುದ್ಧ ಹೋರಾಡುವ ಧಾರ್ಮಿಕ ಸಮುದಾಯಕ್ಕೆ ಸೇರಿದವರಾಗಿರುತ್ತೇವೆ” ಎನ್ನುವ ರೈಸ್, “ನಾನೀಗ ವಿಜ್ಞಾನವನ್ನು ಅಪ್ಪಿಕೊಳ್ಳುವ ಹಾಗೂ ಅದಕ್ಕಾಗಿ ತನ್ನ ಧರ್ಮ ಗ್ರಂಥವನ್ನು ಬಳಸುವ ಧರ್ಮವನ್ನು ನೋಡುತ್ತಿದ್ದೇನೆ” ಎನ್ನುತ್ತಾರೆ.

9/11 ದಾಳಿಯ ನಂತರ ಮುಸ್ಲಿಮರ ವಿರುದ್ಧ ಹೆಚ್ಚಿದ್ದ ದ್ವೇಷಾಪರಾಧಗಳು ಹಾಗೂ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿದ್ದ ಪರಧರ್ಮ ದ್ವೇಷದ ಭಾಷೆಯ ಸಂದರ್ಭದಲ್ಲಿ ಸಿಲ್ವಿಯಾ ಚಾನ್ ಮಲಿಕ್ ಅವರು ಪದವಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. “ಪರ್ಲ್ ಹಾರ್ಬರ್ ದಾಳಿಯ ನಂತರ ಜಪಾನಿ ಅಮೆರಿಕನ್ನರ ಚರಿತ್ರೆಯೊಂದಿಗೆ ಹೋಲಿಸುತ್ತಾ, ಏನು ನಡೆಯುತ್ತಿದ್ದೆ ಎಂಬುದನ್ನು ಅರಿಯಲು ನಾನು ಕುತೂಹಲಿಯಾಗಿದ್ದೆ. ನಾನೇ ವೈಯಕ್ತಿಕವಾಗಿ ನೈಜ ಮುಸ್ಲಿಮರನ್ನು ಭೇಟಿಯಾಗಲು ಪ್ರಾರಂಭಿಸಿದ ನಂತರ ಹಾಗೂ ಇಸ್ಲಾಂ ಕುರಿತು ನಾನೇ ಅಧ್ಯಯನ ನಡೆಸತೊಡಗಿದ ನಂತರ ನಾನು ದಿಗ್ಮೂಢಳಾಗಿದ್ದೆ” ಎಂದು ಆಕೆ ಹೇಳುತ್ತಾರೆ.

ಇದೇ ರೀತಿ ಚಾನ್ ಮಲಿಕ್ ಕೂಡಾ ಇಸ್ಲಾಂ ಧರ್ಮ ಸ್ವೀಕರಿಸಿದರು. ಆಕೆಯೀಗ ಇಸ್ಲಾಂನ ಚರಿತ್ರೆ ಹಾಗೂ ಅಮೆರಿದಲ್ಲಿನ ಇಸ್ಲಾಮಾಫೋಬಿಯಾ ಕುರಿತು ಸಂಶೋಧನೆ ನಡೆಸುತ್ತಿರುವ ರಟ್ಗರ್ಸ್ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿಯಾಗಿದ್ದಾರೆ.

“ಈಗ ಟಿಕ್ ಟಾಕ್ ನಲ್ಲಿ ಏನಾಗುತ್ತಿದ್ದೆಯೊ ಅದೇ ಅನುಭವ ನನಗೂ ಆಗಿತ್ತು” ಎನ್ನುತ್ತಾರವರು. “ಆ ಸಮಯದಲ್ಲಿ, ನಾನು ಭೇಟಿ ಮಾಡಿದ ಮುಸ್ಲಿಮರು ಯಾಕೆ ನಾನು ಸುದ್ದಿಗಳಲ್ಲಿ ಕೇಳಿದ ಮುಸ್ಲಿಮರಿಗಿಂತ ವಿಭಿನ್ನವಾಗಿದ್ದಾರೆ ಎಂದು ವಿಸ್ಮಯಗೊಂಡಿದ್ದೆ. ಜನಪ್ರಿಯ ನಂಬಿಕೆ ಹಾಗೂ ಸತ್ಯದ ನಡುವೆ ಅಂತಹ ದೊಡ್ಡ ಕಂದಕವಿರುವುದನ್ನು ನಾನೆಂದಿಗೂ ಅನುಭವಿಸಲೇ ಇಲ್ಲ” ಎಂದು ಆಕೆ ವಿವರಿಸುತ್ತಾರೆ.

" ಜನರು ಈಗಾಗಲೇ ಜಗತ್ತಿಗಿರುವ ದೃಷ್ಟಿಕೋನಕ್ಕೆ ಪೂರಕ ಅಂಶಗಳನ್ನು ಹುಡುಕಲು ಕುರ್ ಆನ್ ಓದಲು ಆರಂಭಿಸುತ್ತಾರೆ " ಎಂದು ಯೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗ್ರೇವಲ್ ಹೇಳುತ್ತಾರೆ.

“ಜನಾಂಗೀಯವಾದಿಗಳು ತಮ್ಮ ಜನಾಂಗೀಯ ಪಕ್ಷಪಾತವನ್ನು ದೃಢಪಡಿಸಿಕೊಳ್ಳಲು ಹೇಗೆ ಕುರ್ ಆನ್ ಗ್ರಂಥದತ್ತ ನೋಡುತ್ತಿದ್ದಾರೊ, ಹಾಗೆಯೆ ಎಡ ಪಂಥೀಯರು ಆ ಗ್ರಂಥದಲ್ಲಿನ ಪ್ರಗತಿಪರ ಸಂದೇಶಗಳಿಗಾಗಿ ಆ ಗ್ರಂಥವನ್ನು ಓದುತ್ತಿದ್ದಾರೆ” ಎಂದು ಆಕೆ ಹೇಳುತ್ತಾರೆ. “ಧರ್ಮಗ್ರಂಥದಲ್ಲಿನ ಪ್ರತಿ ಸಾಲೂ ಸಂಕೀರ್ಣವಾಗಿದ್ದು, ಹಲವು ಓದನ್ನು ಬಯಸುತ್ತದೆ” ಎನ್ನುವ ಅವರು, “ಟಿಕ್ ಟಾಕ್ ಬಳಕೆದಾರರು ತಮಗೇನು ಸಿಗುತ್ತದೆ ಎಂಬ ಬಯಕೆಯಲ್ಲಿ ಕುರ್ ಆನ್ ನತ್ತ ಬರುತ್ತಿದ್ದಾರೆ” ಎಂದು ಹೇಳುತ್ತಾರೆ.

9/11 ರ ದಾಳಿಯ ಬಳಿಕ ಅಮೇರಿಕ ಸರಕಾರ ಇಸ್ಲಾಂ ಧರ್ಮ ಹಾಗು ಮುಸ್ಲಿಮರ ಬಗ್ಗೆ ಮಾಡಿರುವ ಅಪಪ್ರಚಾರವನ್ನು ಮೆಗನ್ ಬಿ ರೈಸ್ ಕಂಡಿದ್ದಾರೆ. ತಾನು ಕುರ್ ಆನ್ ಓದಲು ಹಾಗು ಅಧ್ಯಯನ ಮಾಡಲು ಪ್ರಾರಂಭಿಸಿದ ಬಳಿಕವೇ ತನಗೆ ಇಸ್ಲಾಂ ಬಗ್ಗೆ ಇದ್ದ ತಪ್ಪು ಕಲ್ಪನೆಗಳು ದೂರವಾದವು ಎನ್ನುತ್ತಾರೆ ಅವರು. ಗಾಝಾದಲ್ಲಿ ಸಂಕಷ್ಟದಲ್ಲಿರುವವರಿಗೆ ನೈತಿಕ ಬೆಂಬಲವಾಗಿ ಕುರ್ ಆನ್ ಓದುತ್ತಿದ್ದ ಅವರಿಗೆ ಈಗ ಅದು ಜೀವನದ ಪ್ರಮುಖ ಅಂಗವಾಗಿಬಿಟ್ಟಿದೆ. ಎಲ್ಲರಿಗೂ ಅದು ಹಾಗೆ ಆಗಬೇಕೆಂದಿಲ್ಲ ಎಂದೂ ಅವರು ಹೇಳುತ್ತಾರೆ. " ನಿಮ್ಮ ಧರ್ಮ , ನಂಬಿಕೆ ಯಾವುದೇ ಇರಲಿ, ಇತರರ ನಂಬಿಕೆಯ ಬಗ್ಗೆ ನೀವು ಅಧ್ಯಯನ ಮಾಡುವುದು ಅವರೆಡೆಗೆ ನಿಮಗೆ ಗೌರವ ಹಾಗು ಅನುಕಂಪ ಬೆಳೆಯಲು ನೆರವಾಗುತ್ತದೆ " ಎನ್ನುತ್ತಾರೆ ರೈಸ್.

'ದಿ ಗಾರ್ಡಿಯನ್' ನಲ್ಲಿ ಅಲೈನ ಡೆಮೊಪೌಲಸ್ ಅವರ ವರದಿ ಆಧರಿತ 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News