ಜರ್ಮನಿಯ ಸಣ್ಣ ಏರ್ ಪೋರ್ಟ್ ನಲ್ಲಿ ನಿಂತಿದ್ದ ಮತ್ತೊಂದು ನಿಕರಾಗುವ ವಿಮಾನ!

Update: 2024-01-03 17:58 GMT

Photo: PTI 

ಅಹಮದಾಬಾದ್: ಮಾನವ ಕಳ್ಳಸಾಗಣೆ ಆರೋಪದ ಮೇಲೆ 96 ಗುಜರಾತಿಗಳು ಸೇರಿದಂತೆ 303 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್ನ ವಟ್ರಿ ವಿಮಾನ ನಿಲ್ದಾಣದಲ್ಲಿ ತಡೆದ ಎರಡು ದಿನಗಳ ಮೊದಲು, 200 ಪ್ರಯಾಣಿಕರನ್ನು ಹೊತ್ತ ದುಬೈ-ನಿಕರಾಗುವಾ ವಿಮಾನವು ಜರ್ಮನಿಯ ಸಣ್ಣ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು timesofindia ವರದಿ ಮಾಡಿದೆ.

ಜರ್ಮನ್ ನಲ್ಲಿ ನಿಂತಿದ್ದ ವಿಮಾನದಲ್ಲಿ ಸುಮಾರು 60 ಮಂದಿ ಗುಜರಾತ್ ಮೂಲದವರಿದ್ದರು ಎನ್ನಲಾಗಿದೆ. ವಟ್ರಿ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮರಳಿದ ವಿಮಾನದಲ್ಲಿ ಅಕ್ರಮ ವಲಸಿಗರಿಗೆ ನೆರವಾಗಿದ್ದ, ಅದೇ ಏಜೆಂಟರು ಜರ್ಮನಿಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ. ಈ ಚಾರ್ಟೆಡ್ ವಿಮಾನವು 10-12 ಗಂಟೆಗಳ ಜರ್ಮನಿಯ ವಿಮಾನ ನಿಲ್ದಾಣದಲ್ಲಿ ನಿಂತಿತ್ತು ಎಂದು ಮೂಲವೊಂದು ತಿಳಿಸಿದೆ.

"ಅಮೆರಿಕ ತಲುಪಲು ಹೊರಟಿದ್ದ ಅಕ್ರಮ ವಲಸಿಗರು ಮೊದಲು ದುಬೈಗೆ ಬಂದಿಳಿದರು. ಅಲ್ಲಿಂದ ಅವರು ನಿಕರಾಗುವಾ ವಿಮಾನವನ್ನು ಏರಿದರು. ಮಾನವ ಕಳ್ಳಸಾಗಣೆದಾರರು ಕಾನೂನು ಕ್ರಮಕ್ಕೆ ಹೆದರಿ ದೊಡ್ಡ ವಿಮಾನ ನಿಲ್ದಾಣದಲ್ಲಿ ಇಳಿಯುವುದನ್ನು ತಪ್ಪಿಸಿದ್ದರಿಂದ ಜರ್ಮನಿಯ ಸಣ್ಣ ವಿಮಾನ ನಿಲ್ದಾಣದಲ್ಲಿ ಈ ವಿಮಾನವು ಲ್ಯಾಂಡ್ ಆಯಿತು. ನಿಕರಾಗುವಾಗೆ ವಿಮಾನ ಹೊರಡುವ ಮೊದಲು ಪ್ರಯಾಣಿಕರು 10-12 ಗಂಟೆಗಳ ಕಾಲ ಸಣ್ಣ ಏರ್ಪೋರ್ಟ್ ನ ಲಾಂಜ್‌ನಲ್ಲಿ ವಿಶ್ರಾಂತಿ ಪಡೆದರು,” ಎಂದು ಮೂಲಗಳು ತಿಳಿಸಿವೆ.

ಮುಖ್ಯವಾಗಿ ಕಲೋಲ್, ಮೆಹ್ಸಾನಾ, ಆನಂದ್ ಮತ್ತು ಅಹಮದಾಬಾದ್‌ನಿಂದ ಬಂದವರು ಈ ವಿಮಾನದ ಪ್ರಯಾಣಿಕರಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ. ನಿಕರಾಗುವಾದಲ್ಲಿ ಬಂದಿಳಿದ ನಂತರ, ಅವರು ಹೊಂಡುರಾಸ್ ತಲುಪಲು 'ಡಂಕರ್'ಗಳ ಸಹಾಯವನ್ನು ಪಡೆದರು. ಸ್ಥಳೀಯ ಭಾಷೆಯಲ್ಲಿ ಹೇಳುವುದಾದರೆ, 'ಡಂಕರ್' ಎಂದರೆ ಅಕ್ರಮ ವಲಸಿಗರಿಗೆ ಅಮೆರಿಕ ಗಡಿ ದಾಟಲು ಸಹಾಯ ಮಾಡುವ ನಿರ್ವಾಹಕರು.

"ನಿಕರಾಗುವಾ-ಹೊಂಡುರಾಸ್ ಗಡಿಯಲ್ಲಿ, ಈ ಅಕ್ರಮ ವಲಸಿಗರು ಗುಂಡಿನ ದಾಳಿಯನ್ನು ಎದುರಿಸಿದರು. ಅವರ ಮೇಲೆ ಗುಂಡು ಹಾರಿಸಿದವರು ಸ್ಥಳೀಯ ಭದ್ರತಾ ಪಡೆಗಳೋ ಅಥವಾ ಯಾವುದೋ ಗ್ಯಾಂಗ್ ಸದಸ್ಯರೋ ಎಂಬ ಬಗ್ಗೆ ಅವರಿಗೆ ಖಚಿತ ಮಾಹಿತಿಯಿಲ್ಲ. ನಂತರ ಅವರು ಗ್ವಾಟೆಮಾಲಾಕ್ಕೆ ತೆರಳಿ ಎರಡು ದಿನಗಳ ಕಾಲ ಉಳಿದುಕೊಂಡರು. ನಂತರ ಮೆಕ್ಸಿಕೊಕ್ಕೆ ದಾಟಲು ಎರಡು ಬಸ್‌ಗಳನ್ನು ಅವರಿಗಾಗಿ ಕಾಯ್ದಿರಿಸಲಾಯಿತು, ”ಎಂದು ಮೂಲಗಳು ತಿಳಿಸಿವೆ. ಈ ಅಕ್ರಮ ವಲಸಿಗರಲ್ಲಿ ಕೆಲವರು ಮೆಕ್ಸಿಕೋದಲ್ಲಿ ಉಳಿದುಕೊಂಡಿದ್ದರೆ, ಕೆಲವರು ಅಮೆರಿಕ ಗಡಿ ದಾಟಿರಬಹುದು ಎಂದು ಇನ್ನೊಂದು ಮೂಲವು ಹೇಳಿದೆ.

ಡಿಸೆಂಬರ್ 21 ರಂದು, 303 ಪ್ರಯಾಣಿಕರೊಂದಿಗೆ ನಿಕರಾಗುವಾಗೆ ಹೊರಟಿದ್ದ ವಿಮಾನವು ಫ್ರಾನ್ಸ್ ನಲ್ಲಿ ಇಳಿದಿತ್ತು. ಅನಾಮಧೇಯ ಕರೆಯೊಂದು ವಿಮಾನದಲ್ಲಿ ಮಾನವ ಕಳ್ಳಸಾಗಣೆಯ ಸುಳಿವು ನೀಡಿತ್ತು. ಬಳಿಕ ಎಲ್ಲಾ ಪ್ರಯಾಣಿಕರನ್ನು ಇಳಿಸಿ ವಟ್ರಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಗೊಳಪಡಿಸಿದಾಗ ಅಕ್ರಮ ವಲಸೆಯು ಖಚಿತವಾಯಿತು. ಡಿಸೆಂಬರ್ 24 ರಂದು, ವಟ್ರಿ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ನ್ಯಾಯಾಲಯವು ಪ್ರಯಾಣಿಕರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಬಳಿಕ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. 303 ಪ್ರಯಾಣಿಕರಲ್ಲಿ 276 ಮಂದಿ ಮಾತ್ರ ಮುಂಬೈಗೆ ಬಂದಿಳಿದರು. ಉಳಿದವರು ಫ್ರಾನ್ಸ್ನ ಆಶ್ರಯ ಕೋರಿ ಅಲ್ಲೇ ಉಳಿದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News