ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಗೆ ಮತ್ತೊಂದು ಸಂಕಷ್ಟ; ತಿರುಗುಬಾಣವಾದ `ಸೈಫರ್ ಪ್ರಕರಣ'

Update: 2023-08-27 17:33 GMT

 ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್‍

ಇಸ್ಲಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್‍ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. `ಸೈಫರ್' ಪ್ರಕರಣ ಈಗ ಅವರಿಗೇ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆ ಸ್ಪಷ್ಟವಾಗಿದೆ ಎಂದು ಮಾಧ್ಯಮಗಳು ರವಿವಾರ ವರದಿ ಮಾಡಿವೆ.

2022ರ ಎಪ್ರಿಲ್‍ನಲ್ಲಿ ಸಂಸತ್‍ನಲ್ಲಿ ಅವಿಶ್ವಾಸಮತ ಮಂಡಿಸುವ ಮೂಲಕ ಆಗ ಪ್ರಧಾನಿಯಾಗಿದ್ದ ಇಮ್ರಾನ್‍ರನ್ನು ಪದಚ್ಯುತಗೊಳಿಸಲಾಗಿತ್ತು. ಆದರೆ ತನ್ನ ಸರಕಾರವನ್ನು ಉರುಳಿಸುವ ಬಗ್ಗೆ ಅಮೆರಿಕ ಪಿತೂರಿ ರೂಪಿಸಿದೆ. ಈ ಪಿತೂರಿಯ ಮಾಹಿತಿಯನ್ನು ಒಳಗೊಂಡ `ಸೈಫರ್(ಗುಪ್ತ ಪತ್ರ) ತನ್ನ ಕೈಸೇರಿದೆ. ಪಿತೂರಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಆಗ ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ ಅಸಾದ್ ಮಜೀದ್‍ಖಾನ್‍ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದರು. ಅಲ್ಲದೆ ಲಾಹೋರ್‍ನಲ್ಲಿ ನಡೆದಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ `ಸೈಫರ್' ಅನ್ನು ಪ್ರದರ್ಶಿಸಿದ್ದರು.

ಈ ಸಭೆಯ ನಿರ್ಣಯದ ಕುರಿತ ವರದಿ ಎಂದು ಹೇಳಲಾದ ಲೇಖನ ಅಮೆರಿಕದ `ದಿ ಇಂಟರ್‍ಸೆಪ್ಟ್' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. `ರಶ್ಯ-ಉಕ್ರೇನ್ ಯುದ್ಧದಲ್ಲಿ ಇಮ್ರಾನ್ ನಿರ್ಲಿಪ್ತ ನಿಲುವು ತಳೆದಿರುವುದರಿಂದ ಅವರನ್ನು ಪದಚ್ಯುತಗೊಳಿಸಲು ಅಮೆರಿಕ ಬಯಸಿದೆ ಎಂಬುದು ಸಭೆಯ ಸಾರಾಂಶವಾಗಿದೆ. ಆದರೆ ಈ ವರದಿಯನ್ನು ದೃಢಪಡಿಸುವುದಿಲ್ಲ' ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು. ಅಮೆರಿಕ ಆರೋಪವನ್ನು ನಿರಾಕರಿಸಿದೆ.

ಈ ಮಧ್ಯೆ, ಇಮ್ರಾನ್‍ರ ಮಾಜಿ ಪ್ರಧಾನ ಕಾರ್ಯದರ್ಶಿ ಅಝಮ್ ಖಾನ್ ನ್ಯಾಯಾಲಯಕ್ಕೆ ಹಾಜರಾಗಿ `ರಾಜಕೀಯ ಲಾಭಕ್ಕಾಗಿ ಮತ್ತು ತನ್ನ ವಿರುದ್ಧದ ಅವಿಶ್ವಾಸ ನಿರ್ಣಯದಿಂದ ತಪ್ಪಿಸಿಕೊಳ್ಳಲು ಇಮ್ರಾನ್ `ಸೈಫರ್' ಪ್ರಕರಣ ಉಲ್ಲೇಖಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದು ಇಮ್ರಾನ್‍ಗೆ ಮುಳುವಾಗಿದೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಇಮ್ರಾನ್‍ರನ್ನು ಭಯೋತ್ಪಾದನೆ ನಿಗ್ರಹ ವಿಭಾಗ ಮತ್ತು ಫೆಡರಲ್ ತನಿಖಾ ಏಜೆನ್ಸಿ ಶನಿವಾರ ವಿಚಾರಣೆಗೆ ಒಳಪಡಿಸಿದೆ. `ಆದರೆ ತಾನು ಈ ರಹಸ್ಯ ಪತ್ರವನ್ನು ಎಲ್ಲಿ ಇರಿಸಿದ್ದೇನೆ ಎಂಬುದು ನೆನಪಾಗ್ತಿಲ್ಲ. ಅದೀಗ ಕಳೆದುಹೋಗಿದೆ. ಕಾರ್ಯಕರ್ತರ ರ್ಯಾಲಿಯಲ್ಲಿ ಪ್ರದರ್ಶಿಸಿದ್ದು ಸೈಫರ್ ಅಲ್ಲ, ಅದು ಸಂಪುಟ ಸಭೆಯ ವರದಿ' ಎಂದು ಇಮ್ರಾನ್ ಹೇಳಿಕೆ ನೀಡಿದ್ದಾರೆ.

ಇದೀಗ ಸರಕಾರದ ರಹಸ್ಯ ಪತ್ರವನ್ನು ಸೂಕ್ತವಾಗಿ ನಿರ್ವಹಿಸದೆ ನಿರ್ಲಕ್ಷ್ಯ ತೋರಿದ್ದು ಮತ್ತು ಅದನ್ನು ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಇಮ್ರಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸರಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಡಾನ್' ವರದಿ ಮಾಡಿದೆ.

ಸೈಫರ್ ಪ್ರಕರಣ

ಸರಳವಾಗಿ ಹೇಳುವುದಾದರೆ ಸೈಫರ್ ಎಂದರೆ ನಿರ್ಧಿಷ್ಟ ದಿನಾಂಕ ಮತ್ತು ಕ್ರಮಾಂಕವನ್ನು ಹೊಂದಿರುವ ಒಂದು ರಹಸ್ಯ, ನಿರ್ಬಂಧಿತ ರಾಜತಾಂತ್ರಿಕ ಸಂವಹನವಾಗಿದ್ದು ಇದು ಗೂಢ ಸಾಂಕೇತಿಕ ಭಾಷೆಯನ್ನು ಹೊಂದಿರುತ್ತದೆ. ಸೈಫರ್‍ನ ಮೂಲಪ್ರತಿ ವಿದೇಶಾಂಗ ಸಚಿವಾಲಯದಲ್ಲಿ ಇರುತ್ತದೆ ಮತ್ತು ಅದರ ಪ್ರತಿ(ಕಾಪಿ ತೆಗೆಯುವುದು)ಗಳನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿದೆ.

ಈ ರಹಸ್ಯ ಪತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಲ್ಲದೆ ಕಳೆದು ಹಾಕಿರುವ ಕ್ರಿಮಿನಲ್ ಪ್ರಕರಣ ಈಗ ಇಮ್ರಾನ್ ವಿರುದ್ಧ ದಾಖಲಾಗುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News