ಉಕ್ರೇನ್‌ನ ಇನ್ನೊಂದು ಗ್ರಾಮ ರಶ್ಯ ಸೇನೆಯಿಂದ ಮರುವಶ

Update: 2024-09-14 17:23 GMT

ಸಾಂದರ್ಭಿಕ ಚಿತ್ರ

ಮಾಸ್ಕೋ : ಪೂರ್ವ ಉಕ್ರೇನ್‌ನಲ್ಲಿ ಮುನ್ನುಗ್ಗು ತ್ತಿರುವ ರಶ್ಯನ್ ಪಡೆಗಳು ಶನಿವಾರ ಇನ್ನೊಂದು ಗ್ರಾಮವನ್ನು ಮರುವಶಪಡಿಸಿಕೊಂಡಿದೆ. ಝೆಲಾನೊಯೆ ಪೆರ್ವೊಯೆ ಪ್ರದೇಶವನ್ನು ಮುಕ್ತಗೊಳಿಸಲಾಗಿದ್ದು, ರಶ್ಯದ ದಕ್ಷಿಣ ತುಕಡಿಗಳ ಸಕ್ರಿಯ ಹಾಗೂ ನಿರ್ಣಾಯಕ ಕಾರ್ಯಾಚರಣೆಗೆ ಧನ್ಯವಾದಗಳು ರಶ್ಯನ್ ರಕ್ಷಣಾ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಝೆಲಾನೊಯೆ ಪೆರ್ವೊಯೆ ಗ್ರಾಮವು ಪೊಕ್ರೊವ್‌ಸ್ಕ್ ಜಿಲ್ಲೆಯಲ್ಲಿದ್ದು, ಉಕ್ರೇನ್ ಸೇನೆಯ ಪಾಲಿಗೆ ಅತ್ಯಂತ ಮಹತ್ವದ ವ್ಯೆಹಾತ್ಮಕ ಕೇಂದ್ರವಾಗಿದೆ. ಇತ್ತೀಚಿನ ವಾರಗಳಲ್ಲಿ ಡೊನೆಟ್‌ಸ್ಕ್‌ನ ಪೂರ್ವ ಪ್ರಾಂತದಲ್ಲಿ ರಶ್ಯನ್ ಪಡೆಗಳು ಕ್ಷಿಪ್ರ ಮುನ್ನಡೆಯನ್ನು ಸಾಧಿಸುತ್ತಿದೆ. ಇದರಿಂದಾಗಿ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳ ಕೊರತೆಯನ್ನು ಎದುರಿಸುತ್ತಿರುವ ಉಕ್ರೇನ್ ಸೇನೆಯು ತೀವ್ರ ಒತ್ತಡವನ್ನು ಎದುರಿಸುವಂತಾಗಿದೆ.

ತನ್ನ ಪಡೆಗಳು ಪೂರ್ವ ಉಕ್ರೇನ್‌ನ ಸಣ್ಣ ಪುಟ್ಟ ಹಳ್ಳಿಗಳನ್ನು ವಶಪಡಿಸಿಕೊಳ್ಳುತ್ತಾ ಬರುತ್ತಿದೆಯೆಂದು ರಶ್ಯವು ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಿದೆ. ಈ ಪ್ರಾಂತದ ಕ್ರಾನ್ನೊಗೊರಿವ್‌ಕಾ ಪಟ್ಟಣವನ್ನು ಕೂಡಾ ತಾನು ವಶಪಡಿಸಿಕೊಂಡಿರುವುದಾಗಿ ರಶ್ಯವು ಮಂಗಳವಾರ ತಿಳಿಸಿತ್ತು.

ಆಗಸ್ಟ್ 6ರಂದು ಉಕ್ರೇನ್ ಸೇನೆಯು ರಶ್ಯದ ಗಡಿಪ್ರದೇಶವಾದ ಕರ್ಸ್ಕ್ ಮೇಲೆ ಅತಿಕ್ರಮಣ ನಡೆಸಿದ್ದು, ಹಲವು ಕಿಲೋ ಮೀಟರ್‌ಗಳವರೆಗೆ ಮುನ್ನಡೆಯನ್ನು ಸಾಧಿಸಿತ್ತು ಹಾಗೂ 25ಕ್ಕೂ ಅಧಿಕ ವಸತಿಪ್ರದೇಶಗಳನ್ನು ವಶಪಡಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News