ಕೆಂಪು ಸಮುದ್ರದಲ್ಲಿ ಚೀನಾ ಒಡೆತನದ ನೌಕೆಯ ಮೇಲೆ ದಾಳಿ
Update: 2024-03-24 17:39 GMT
ಬೀಜಿಂಗ್: ಯೆಮನ್ ಕರಾವಳಿಯ ಬಳಿ ಕೆಂಪು ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದ ಚೀನಾ ಒಡೆತನದ ಟ್ಯಾಂಕರ್ ನೌಕೆಯನ್ನು ಗುರಿಯಾಗಿಸಿ ಹೌದಿಗಳು ಶನಿವಾರ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಪನಾಮಾದ ಧ್ವಜ ಹೊಂದಿದ್ದ, ಚೀನಾ ಒಡೆತನದ ಹುವಾಂಗ್ ಪು ಟ್ಯಾಂಕರ್ ನೌಕೆಯಿಂದ ವಿಪತ್ತಿನ ಸಂದೇಶ ಬಂದಿದೆ. ಆದರೆ ನೆರವನ್ನು ಕೋರಿಲ್ಲ. ಕ್ಷಿಪಣಿ ದಾಳಿಯಿಂದ ಯಾವುದೇ ನಾಶ-ನಷ್ಟ ವರದಿಯಾಗಿಲ್ಲ ಮತ್ತು ಹಡಗು ತನ್ನ ಪ್ರಯಾಣವನ್ನು ಮುಂದುವರಿಸಿದೆ ಎಂದು ವರದಿ ತಿಳಿಸಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ವಿರೋಧಿಸಿ ಮತ್ತು ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸಿ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಸಾಗುವ ವಾಣಿಜ್ಯ ನೌಕೆಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಯೆಮನ್‍ನಲ್ಲಿ ನೆಲೆ ಹೊಂದಿರುವ, ಇರಾನ್ ಬೆಂಬಲಿತ ಹೌದಿಗಳು ಪ್ರತಿಪಾದಿಸುತ್ತಿದ್ದಾರೆ.