ಕುರ್ ಆನ್ ದಹನ ನಿಷೇಧ: ಮಸೂದೆ ಅಂಗೀಕರಿಸಿದ ಡೆನ್ಮಾರ್ಕ್ ಸಂಸತ್

Update: 2023-12-08 14:07 GMT

Photocredit : aljazeera.com

ಕೋಪನ್ ಹೇಗನ್: ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ಲಾಂನ ಪವಿತ್ರ ಗ್ರಂಥ ಕುರ್ ಆನ್ ಗೆ ಅಪಮಾನ ಮಾಡುವುದರ ವಿರುದ್ಧ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ, ಭದ್ರತಾ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಡೆನ್ಮಾರ್ಕ್ ಸಂಸತ್ತು ಕುರ್ ಆನ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ದಹಿಸುವುದನ್ನು ನಿಷೇಧಿಸುವ ಮಸೂದೆಯೊಂದನ್ನು ಅಂಗೀಕರಿಸಿದೆ ಎಂದು aljazeera.com ವರದಿ ಮಾಡಿದೆ.

ಮಾನ್ಯತೆ ಹೊಂದಿರುವ ಧಾರ್ಮಿಕ ಸಮುದಾಯವೊಂದರ ಗಮನಾರ್ಹ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಬರಹಗಳಿಗೆ ಸೂಕ್ತವಲ್ಲದ ರೀತಿಯಲ್ಲಿ ಉಪಚರಿಸುವುದನ್ನು ನಿಷೇಧಿಸಿ ಗುರುವಾರ ಮಂಡಿಸಲಾಗಿದ್ದ ಮಸೂದೆಯ ಪರ 94 ಮತಗಳು ಚಲಾವಣೆಗೊಂಡರೆ, ಅದರ ವಿರುದ್ಧ 77 ಮತಗಳು ಬಿದ್ದವು. ಡೆನ್ಮಾರ್ಕ್ ಸಂಸತ್ತು 179 ಸದಸ್ಯ ಬಲವುಳ್ಳದ್ದಾಗಿದೆ.

ಪ್ರಾಯೋಗಿಕವಾಗಿ ಪವಿತ್ರ ಗ್ರಂಥಗಳನ್ನು ಸಾರ್ವಜನಿಕವಾಗಿ ದಹಿಸುವುದು ಅಥವಾ ಹರಿದು ಹಾಕುವುದು ಅಥವಾ ಅಂತಹ ಕೃತ್ಯಗಳನ್ನು ವೀಡಿಯೊಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡುವ ಉದ್ದೇಶ ಹೊಂದಿರುವುದನ್ನು ಈ ಮಸೂದೆಯು ನಿಷೇಧಿಸುತ್ತದೆ.

ಈ ಕಾನೂನನ್ನು ಉಲ್ಲಂಘಿಸುವವರಿಗೆ ದಂಡ ಅಥವಾ ಎರಡು ವರ್ಷಗಳ ಕಾಲ ಸೆರೆವಾಸ ವಿಧಿಸಬಹುದಾಗಿದೆ. ಈ ಮಸೂದೆಯು ಶಾಸನವಾಗಿ ಜಾರಿಗೆ ಬರುವುದಕ್ಕೂ ಮುನ್ನ, ರಾಣಿ ಮಾರ್ಗರೆಥ್ ಅಧಿಕೃತವಾಗಿ ಅದಕ್ಕೆ ಸಹಿ ಮಾಡಬೇಕಿದೆ. ಈ ತಿಂಗಳೊಳಗೆ ಮಸೂದೆಗೆ ಅಂಕಿತ ಬೀಳುವ ನಿರೀಕ್ಷೆ ಇದೆ.

ಡೆನ್ಮಾರ್ಕ್ ನಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವಂತಹ ವ್ಯವಸ್ಥಿತ ಅಣಕವನ್ನು ತಡೆಯುವ ಉದ್ದೇಶವನ್ನು ಈ ಶಾಸನ ಹೊಂದಿದೆ ಎಂದು ಡೆನ್ಮಾರ್ಕ್ ನ ಕಾನೂನು ಸಚಿವಾಲಯವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News