ಕ್ರೀಡಾ ಸ್ಪರ್ಧೆಗಳಲ್ಲಿ ಹಿಜಾಬ್ ಧರಿಸಲು ನಿಷೇಧ | ಫಾನ್ಸ್ ನಿರ್ಧಾರಕ್ಕೆ ವಿಶ್ವಸಂಸ್ಥೆ ತಜ್ಞರ ತೀವ್ರ ಖಂಡನೆ
ಜೀನೆವಾ : ಹಿಜಾಬ್ ಧರಿಸುವ ಮಹಿಳೆಯರು ಹಾಗೂ ಬಾಲಕಿಯರನ್ನು ಕ್ರೀಡಾ ಸ್ಪರ್ಧೆಗಳಲ್ಲಿ ನಿಷೇಧಿಸುವ ಫ್ರಾನ್ಸ್ ಸರಕಾರದ ನಿರ್ಧಾರವನ್ನು ವಿಶ್ವಸಂಸ್ಥೆಯ ಹಕ್ಕುಗಳ ತಜ್ಞರು ಸೋಮವಾರ ಬಲವಾಗಿ ಖಂಡಿಸಿದ್ದಾರೆ. ಇದೊಂದು ತಾರತಮ್ಯವಾದಿ ನೀತಿಯಾಗಿದ್ದು, ಅದನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತಗಳನ್ನು ಅಥ್ಲೀಟ್‌ಗಳನ್ನು ಧರಿಸುವುದನ್ನು ನಿಷೇಧಿಸುವ ಕಾನೂನುಗಳನ್ನು ಫ್ರಾನ್ಸ್ ಸರಕಾರವು 2024ರ ಒಲಿಂಪಿಕ್ ಕ್ರೀಡಾಕೂಟದ ಸಂದರ್ಭ ಜಾರಿಗೊಳಿಸಿತ್ತು. ಫ್ರಾನ್ಸ್ ನ ಫುಟ್ಟಾಲ್ ಹಾಗೂ ಬಾಸ್ಕೆಟ್ ಬಾಲ್ ಕ್ರೀಡಾ ಫೆಡರೇಶನ್‌ಗಳು ಕೂಡಾ ಅಮೆಚೂರ್ ಮಟ್ಟದ ಕ್ರೀಡಾಕೂಟಗಳಲ್ಲಿ ಹಿಜಾಬ್ ಧರಿಸುವವರನ್ನು ಹೊರಗಿಡಲು ನಿರ್ಧರಿಸಿರುವುದಕ್ಕೆ ವಿಶ್ವಸಂಸ್ಥೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ನಿರ್ಧಾರಗಳು ಅಸಮಾನತೆ ಹಾಗೂ ತಾರತಮ್ಯದಿಂದ ಕೂಡಿವೆ. ತಮ್ಮ ಗುರುತನ್ನು ತಮ್ಮ ಧರ್ಮವನ್ನು ಅಥವಾ ನಂಬಿಕೆಯನ್ನು ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಸ್ವತಂತ್ರವಾಗಿ ವ್ಯಕ್ತಪಡಿಸಲು ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಪಾಲ್ಗೊಳ್ಳಲು ಇರುವ ಅಥ್ಲೀಟ್ ಗಳ ಹಕ್ಕುಗಳನ್ನು ಕಸಿಯುತ್ತದೆ ಎಂದು ವಿಶ್ವಸಂಸ್ಥೆಯ ಎಂಟು ಮಂದಿ ಸ್ವತಂತ್ರ ತಜ್ಞರು ಸಹಿ ಹಾಕಿದ ಹೇಳಿಕೆಯು ತಿಳಿಸಿದೆ.
ಹಿಜಾಬ್ ಧರಿಸುವ ಮುಸ್ಲಿಂ ಮಹಿಳೆಯರು ಹಾಗೂ ಬಾಲಕಿಯರಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಬದುಕಿನಲ್ಲಿ ಪಾಲ್ಗೊಳ್ಳಲು ಸಮಾನ ಹಕ್ಕುಗಳಿವೆ.
ಸಾಂಸ್ಕೃತಿಕ ಹಾಗೂ ಅಲ್ಪಸಂಖ್ಯಾತ ವಿಷಯಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಈ ಹೇಳಿಕೆಗೆ ಸಹಿಹಾಕಿದ್ದಾರೆ. ಮಹಿಳೆಯರು ಮತ್ತು ಬಾಲಕಿಯರ ವಿರುದ್ಧದ ತಾರತಮ್ಯ ತಡೆ ಕುರಿತ ವಿಶ್ವಸಂಸ್ಥೆಯ ಕಾರ್ಯಸಮಿತಿಯ ಸದಸ್ಯರೂ ಈ ಹೇಳಿಕೆಗೆ ಸಹಿ ಹಾಕಿದ್ದಾರೆ.