ರಾಜಕೀಯಕ್ಕೆ ಸೇರ್ಪಡೆಯಾದ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್
ಢಾಕಾ: ಬಾಂಗ್ಲಾದೇಶದ ತಾರಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರು ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು, ಜನವರಿ 7ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಅವಾಮಿ ಲೀಗ್ ನಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಕುರಿತು AFP ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಅವಾಮಿ ಪಕ್ಷದ ಪ್ರಧಾನ ಜಂಟಿ ಕಾರ್ಯದರ್ಶಿ ಬಹೌದ್ದೀನ್ ನಸೀಮ್, ಮುಂದಿನ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಲು ಪಕ್ಷದಿಂದ ಶಕೀಬ್ ಹಸನ್ ನಾಮಪತ್ರಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಚುನಾವಣೆಯನ್ನು ಬಹಿಷ್ಕರಿಸಲು ಪ್ರಮುಖ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ.
ಆಲ್ ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ರನ್ನು ಪಕ್ಷಕ್ಕೆ ಬರ ಮಾಡಿಕೊಂಡ ನಸೀಮ್, “ಅವರೊಬ್ಬ ತಾರೆಯಾಗಿದ್ದು, ದೇಶದ ಯುವಜನರ ನಡುವೆ ಭಾರಿ ಜನಪ್ರಿಯತೆ ಹೊಂದಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದೀಯ ಮಂಡಳಿಯು ಶಕೀಬ್ ರ ಸ್ಪರ್ಧೆಯನ್ನು ದೃಢಪಡಿಸಿದೆ. ರಾಷ್ಟ್ರ ರಾಜಧಾನಿ ಢಾಕಾದ ನೈಋತ್ಯ ಜಿಲ್ಲೆಯಲ್ಲಿರುವ ತಮ್ಮ ತವರು ಕ್ಷೇತ್ರವಾದ ಮಗುರಾದಿಂದ ಸ್ಪರ್ಧಿಸಲು ಅವರು ಬಯಸಿದ್ದಾರೆ ಎಂದು ನಸೀಮ್ ತಿಳಿಸಿದ್ದಾರೆ.
ಕ್ರೀಡೆಯು ಭಾರಿ ಜನಪ್ರಿಯವಾಗಿರುವ ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟಿಗರು ರಾಜಕೀಯಕ್ಕೆ ಸೇರ್ಪಡೆಯಾಗುತ್ತಿರುವುದು ಇದು ಹೊಸದೇನಲ್ಲ. ಆದರೆ, ತಮ್ಮ ವೃತ್ತಿ ಜೀವನದ ನಡುವೆಯೇ ಹಾಗೆ ಮಾಡುವುದು ತೀರಾ ವಿರಳ. ಆದರೆ, ಸದ್ಯ ಬಾಂಗ್ಲಾದೇಶ ತಂಡದ ನಾಯಕನಾಗಿರುವ ಶಕೀಬ್ ಅಲ್ ಹಸನ್ ಮಾತ್ರ ತಮ್ಮ ವೃತ್ತಿ ಜೀವನದ ನಡುವೆಯೇ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ.