ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ: ಮರಳಿ ಪ್ರಧಾನಿಯಾಗಿ ಆಯ್ಕೆಯಾಗುವತ್ತ ಶೇಖ್ ಹಸೀನಾ
ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಇಂದು ಬೆಳಗ್ಗೆಯಿಂದ ಮತದಾನ ಪ್ರಾರಂಭಗೊಂಡಿದೆ. ಈ ಚುನಾವಣೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಅವಾಮಿ ಲೀಗ್ ನೇತೃತ್ವದ ಮೈತ್ರಿಕೂಟವು ಸತತ ಐದನೆಯ ಬಾರಿಗೆ ಅಧಿಕಾರಕ್ಕೆ ಮರಳುವತ್ತ ಕಣ್ಣು ನೆಟ್ಟಿದೆ ಎಂದು hindustantimes.com ವರದಿ ಮಾಡಿದೆ.
ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್ಪಿ) ಹಾಗೂ ಸಮಾನ ಮನಸ್ಕ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿರುವ ಬೆನ್ನಿಗೇ ನಿನ್ನೆ ನಡೆದಿದ್ದ ಚುನಾವಣಾ ಪೂರ್ವ ಹಿಂಸಾಚಾರವು ಮತದಾನದ ಮೇಲೆ ಕರಿ ನೆರಳು ಚಾಚಿತ್ತು. ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷವು ಶನಿವಾರದಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಚುನಾವಣೆಯ ವಿಶ್ವಾಸಾರ್ಹತೆ ಕುರಿತು ಪ್ರಶ‍್ನೆ ಎತ್ತಿರುವ ಪ್ರತಿಪಕ್ಷಗಳು ಚುನಾವಣೆಗೆ ಬಹಿಷ್ಕಾರ ಘೋಷಿಸಿದ್ದು, ಜನರೂ ಮತದಾನದಿಂದ ದೂರ ಉಳಿಯಬೇಕು ಎಂದು ಉತ್ತೇಜಿಸುತ್ತಿವೆ. ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ಡಮ್ಮಿ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಚುನಾವಣೆಯು ವಿಶ್ವಾಸಾರ್ಹವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ಈ ಆರೋಪಗಳನ್ನು ಅಲ್ಲಗಳೆದಿದೆ.
ಈ ನಡುವೆ, ಬಾಂಗ್ಲಾದೇಶ ಕಾಲಮಾನವಾದ 8 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಸಂಜೆ ಐದು ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಜನವರಿ 8ರಂದು ಬೆಳಗ್ಗೆಯಿಂದ ಫಲಿತಾಂಶ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಚುನಾವಣೆಯಲ್ಲಿ ಒಟ್ಟು 11.96 ಕೋಟಿ ನೋಂದಾಯಿತ ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಚುನಾವಣೆಗಾಗಿ 42,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಬಾಂಗ್ಲಾದೇಶ ಚುನಾವಣಾ ಆಯೋಗವು ಹೇಳಿದೆ.