ಬಾಂಗ್ಲಾದೇಶ: ತೀವ್ರಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ : 6 ಮಂದಿ ಸಾವು ; 400 ಮಂದಿಗೆ ಗಾಯ

Update: 2024-07-17 13:58 GMT
PC : indiatoday.in

ಢಾಕಾ : ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಕಳೆದ ವಾರದಿಂದ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು ಮಂಗಳವಾರ ನಡೆದ ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಪ್ರಮುಖ ನಗರಗಳಲ್ಲಿ ಅರೆಸೇನಾ ಪಡೆಯನ್ನು ಸರಕಾರ ನಿಯೋಜಿಸಿದೆ. ಬುಧವಾರವೂ ಪ್ರತಿಭಟನೆ ಮುಂದುವರಿದಿದ್ದು ನಾರಾಯಣ್ ಗಂಜ್ ನಗರದಲ್ಲಿ ನೂರಾರು ವಿದ್ಯಾರ್ಥಿಗಳು ರೈಲ್ವೇ ಮಾರ್ಗಕ್ಕೆ ಮುತ್ತಿಗೆ ಹಾಕಿದರು.

ಈ ಮಧ್ಯೆ, ಢಾಕಾ ವಿವಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಂತಾಪ ಕಾರ್ಯಕ್ರಮಕ್ಕೆ ತೆರಳಲು ಪ್ರತಿಭಟನಾ ನಿರತರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಭದ್ರತಾ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ಸುಮಾರು 200ರಷ್ಟು ವಿದ್ಯಾರ್ಥಿಗಳು ಬ್ಯಾರಿಕೇಡ್ ಗಳನ್ನು ತಳ್ಳಿ ಮುಂದುವರಿದಾಗ ಪೊಲೀಸರು ಅವರತ್ತ ಸ್ಟನ್ ಗ್ರೆನೇಡ್ ಎಸೆದರು ಎಂದು ವರದಿಯಾಗಿದೆ.

ಮೀಸಲಾತಿ ವಿರೋಧಿ ವಿದ್ಯಾರ್ಥಿಗಳ ಗುಂಪು ಹಾಗೂ ಪ್ರಧಾನಿ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಘಟಕದ ಸದಸ್ಯರ ನಡುವೆ ಹಲವು ಕ್ಯಾಂಪಸ್ ಗಳಲ್ಲಿ ಘರ್ಷಣೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಲು ಪ್ರಧಾನಿ ರವಿವಾರ ನಿರಾಕರಿಸಿದ ಬಳಿಕ ಪ್ರತಿಭಟನೆ ತೀವ್ರಗೊಂಡಿದೆ. ವಿದ್ಯಾರ್ಥಿಗಳನ್ನು ಚದುರಿಸಲು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ವಿಫಲಗೊಂಡ ಬಳಿಕ ಪೊಲೀಸರು ರಬ್ಬರ್ ಬುಲೆಟ್ ಪ್ರಯೋಗಿಸಿದಾಗ ಕನಿಷ್ಟ 6 ಮಂದಿ ಮೃತಪಟ್ಟಿದ್ದು 400ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸದಸ್ಯರು ಹಾಕಿ ಸ್ಟಿಕ್, ದೊಣ್ಣೆ, ಇಟ್ಟಿಗೆ, ಕಬ್ಬಿಣದ ರಾಡ್ನಿಂದ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರನ್ನು ಬಂಧಿಸದೆ ಪೊಲೀಸರು ಪಕ್ಷಪಾತ ತೋರಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ 1971ರ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡವರ ಮಕ್ಕಳನ್ನು ಒಳಗೊಂಡಂತೆ ನಿರ್ದಿಷ್ಟ ಗುಂಪುಗಳಿಗೆ ನಾಗರಿಕ ಸೇವಾ ಹುದ್ದೆಗಳಲ್ಲಿ 50 ಕ್ಕಿಂತ ಹೆಚ್ಚು ಸ್ಥಾನವನ್ನು ಮೀಸಲಿಡುವ ವ್ಯವಸ್ಥೆಯನ್ನು ವಿರೋಧಿಸಿ ಕಳೆದ ವಾರದಿಂದಲೂ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಶೇಕ್ ಹಸೀನಾ ಅವರನ್ನು ಬೆಂಬಲಿಸುವವರ ಮಕ್ಕಳು ಈ ಯೋಜನೆಯ ಪ್ರಮುಖ ಫಲಾನುಭವಿಗಳು ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಬಿಎನ್‌ಪಿ ಕಚೇರಿಯ ಮೇಲೆ ಪೊಲೀಸ್ ದಾಳಿ

ಈ ಮಧ್ಯೆ, ಬಾಂಗ್ಲಾದ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಪ್ರಧಾನ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ಬಿಎನ್ಪಿ ವಿದ್ಯಾರ್ಥಿ ಘಟಕದ 6 ಸದಸ್ಯರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಢಾಕಾದಲ್ಲಿರುವ ಬಿಎನ್ಪಿ ಪ್ರಧಾನ ಕಚೇರಿಯಲ್ಲಿ ಶೋಧ ನಡೆಸಿದಾಗ ಶಸ್ತ್ರಾಸ್ತ್ರ ಪತ್ತೆಯಾಗಿದೆ. 100ಕ್ಕೂ ಹೆಚ್ಚು ಕಚ್ಛಾ ಬಾಂಬ್ ಗಳು, ಆರು ಬಾಟಲಿಗಳಲ್ಲಿ ಪೆಟ್ರೋಲ್, ಸುಮಾರು 500 ದೊಣ್ಣೆಗಳು, 7 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪತ್ತೆದಾರಿ ದಳದ ಮುಖ್ಯಸ್ಥ ಹರೂನ್ ರಷೀದ್ರನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News