ಕೋವಿಡ್ ಲಸಿಕೆ ಅಡ್ಡಪರಿಣಾಮದ ಕುರಿತು ವಿಚಾರಣೆ ಎದುರಿಸುವಂತೆ ಬಿಲ್ ಗೇಟ್ಸ್, ಫೈಝರ್ ಸಿಇಒಗೆ ಡಚ್ ಕೋರ್ಟ್ ಆದೇಶ‌

Update: 2024-11-03 07:49 GMT

ಡಾ. ಬೌರ್ಲಾ/ ಬಿಲ್ ಗೇಟ್ಸ್ (Photo: PTI)

ಕೋವಿಡ್ ಲಸಿಕೆಗಳ ಕುರಿತು ಒಂದೊಂದೆ ಅಪಸ್ವರ ಈಗ ಜಾಗತಿಕವಾಗಿ ಕೇಳಿ ಬರಲಾರಂಭಿಸಿದೆ. ಕೋವಿಡ್ ಲಸಿಕೆಯ ಮೂಲಕ ದೊಡ್ಡ ಕ್ರಾಂತಿಯೇ ಆಯಿತು ಎಂಬಲ್ಲಿಂದ ಆ ಲಸಿಕೆಯೇ ಸಮಸ್ಯೆಗೆ ಕಾರಣವಾಯಿತು ಎಂಬಲ್ಲಿಗೆ ಈಗ ಬಂದು ತಲುಪುತ್ತಿದೆ. ಕೋವಿಡ್ ಲಸಿಕೆ ತಂದು ಜಗತ್ತನ್ನು ಉಳಿಸಿದರು ಎಂಬ ಕೀರ್ತಿಗೆ ಪಾತ್ರರಾದವರು ಈಗ ಅವರಿಂದಾಗಿಯೇ ಜನರಿಗೆ ಆರೋಗ್ಯ ಸಮಸ್ಯೆ ಬಂದಿದೆ ಎಂಬ ಆರೋಪ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಈ ಅಪಸ್ವರ, ದೂರು, ಆರೋಪಗಳು ಈಗ ಜಗತ್ತಿನ ಅತಿ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಬಾಗಿಲಿಗೂ ತಲುಪಿವೆ. ಆಪಾದಿತ COVID-19 ಲಸಿಕೆ ಹಾನಿಗಳ ಬಗ್ಗೆ ನೆದರ್‌ಲ್ಯಾಂಡ್‌ನಲ್ಲಿ ಬಿಲ್ ಗೇಟ್ಸ್ ಮತ್ತು ಫೈಝರ್ ಸಿಇಒ ನ್ಯಾಯಾಲಯದ ವಿಚಾರಣೆ ಎದುರಿಸುವ ಸಾಧ್ಯತೆಯಿದೆ.

COVID-19 ಲಸಿಕೆ ಗಾಯಗಳ ಕುರಿತು ಮೊಕದ್ದಮೆಯೊಂದು ದಾಖಲಾಗಿದ್ದು ಈ ಕುರಿತು ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಮತ್ತು ಪ್ರಮುಖ ಜಾಗತಿಕ ಸಮಾಜ ಸೇವಕ ಬಿಲ್ ಗೇಟ್ಸ್ ನೆದರ್‌ಲ್ಯಾಂಡ್‌ನಲ್ಲಿ ವಿಚಾರಣೆಯನ್ನು ಎದುರಿಸಬೇಕು ಎಂದು ಡಚ್ ನ್ಯಾಯಾಲಯಾವೊಂದು ತೀರ್ಪು ನೀಡಿದೆ.

ಲಸಿಕೆಗಳು ಅಸುರಕ್ಷಿತವಾಗಿದ್ದವು ಮತ್ತು ದೂರುದಾರರ ಮೇಲೆ ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಬೀರಿದೆ ಎಂದು ಅನೇಕ ಇತರ ಹೈ-ಪ್ರೊಫೈಲ್ ವ್ಯಕ್ತಿಗಳನ್ನೂ ಒಳಗೊಂಡಿರುವ ಪ್ರಕರಣವು ಹೇಳುತ್ತದೆ.

ಈ ಬೆಳವಣಿಗೆಯನ್ನು ಹೆಚ್ಚಾಗಿ ಕೇವಲ ಸ್ಥಳೀಯ ಡಚ್ ಮೂಲಗಳು ವರದಿ ಮಾಡಿವೆ. The Telegraph ಮತ್ತು ಸ್ವತಂತ್ರ ವೇದಿಕೆಗಳಾದ ʼಜೀಬ್ರಾ ಇನ್ಸ್ಪಿರೇಟಿʼಯಂತಹ ಔಟ್‌ಲೆಟ್‌ಗಳು ಪ್ರಕರಣದ ಕುರಿತು ವರದಿ ಮಾಡಿವೆ.

ಮೊಕದ್ದಮೆಯನ್ನು ಮೂಲತಃ ನೆದರ್‌ಲ್ಯಾಂಡ್ಸ್‌ನ ಲೀವಾರ್ಡನ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು ಎಂದು cairnsnews.com ವರದಿ ಹೇಳುತ್ತದೆ.

ಬಿಲ್ ಗೇಟ್ಸ್, ಮಾಜಿ ಡಚ್ ಪ್ರಧಾನಿ ಮತ್ತು ನೆಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ, ಫೈಝರ್ ಸಿಇಒ ಡಾ. ಆಲ್ಬರ್ಟ್ ಬೌರ್ಲಾ ಮತ್ತು ನೆದರ್‌ಲ್ಯಾಂಡ್ಸ್‌ನ COVID-19 ನಿರ್ವಹಣಾ ತಂಡದ ಸದಸ್ಯರು ಕೋವಿಡ್ ಲಸಿಕೆ ಸುರಕ್ಷತೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಪ್ರತಿನಿಧಿಸಿದ್ದಾರೆ ಎಂದು ಮೊಕದ್ದಮೆಯಲ್ಲಿ ಏಳು ಡಚ್ ನಾಗರಿಕರು ಆರೋಪಿಸಿದ್ದಾರೆ.

ಪ್ರತಿವಾದಿಗಳು ಸಂಭಾವ್ಯ ಆರೋಗ್ಯದ ಅಪಾಯಗಳನ್ನು ಕಡೆಗಣಿಸಿದ್ದರಿಂದ ಲಸಿಕೆ ಪಡೆದವರಲ್ಲಿ ಗಮನಾರ್ಹವಾದ ದೈಹಿಕ ಹಾನಿ ಉಂಟಾಗಿದೆ ಎಂದು ಕೊರೋನಾ ಸಂದೇಹವಾದಿಗಳು ಎಂದು ಸ್ವಯಂ-ಗುರುತಿಸಿಕೊಳ್ಳುವ ಗುಂಪು ಆರೋಪಿಸಿದೆ. ಡಿಫೆಂಡರ್ ಹೆಸರಿನ ಮತ್ತೊಂದು ಸ್ವತಂತ್ರ ಮಾಧ್ಯಮ ವೇದಿಕೆಯನ್ನು cairnsnews.com ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರಲ್ಲಿ ಒಬ್ಬರು ಸಾವನ್ನಪ್ಪಿದ್ದು ಉಳಿದ ಆರು ಜನ ಪ್ರಕರಣವನ್ನು ಮುನ್ನಡೆಸಲಿದ್ದಾರೆ ಎಂದು ಡಿಫೆಂಡರ್ ವರದಿ ಮಾಡಿದೆ.

ಬಿಲ್ ಗೇಟ್ಸ್ ಮೇಲಿನ ನ್ಯಾಯಾಲಯದ ವ್ಯಾಪ್ತಿಯನ್ನು ಬಿಲ್ ಗೇಟ್ಸ್ ಪರ ಹಾಜರಾದ ವಕೀಲರು ಪ್ರಶ್ನಿಸಿದ್ದರು. ಆದರೆ ಈ ವಾದವನ್ನು ನ್ಯಾಯಾಲಯ ಸ್ವೀಕರಿಸಿಲ್ಲ. ಬಿಲ್ ಗೇಟ್ಸ್‌ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದು ಅವರ ಮೇಲೆ ಡಚ್ ಕಾನೂನು ಪ್ರಕ್ರಿಯೆಗಳು ಅನ್ವಯಿಸುವುದಿಲ್ಲ ಎಂದು ಗೇಟ್ಸ್ ಪರವಾಗಿ ಹಾಜರಾದವರು ವಾದಿಸಿದ್ದರು.

ವಾದಗಳನ್ನು ಆಲಿಸಿದ ಬಳಿಕ ಪ್ರಕರಣವು ಡಚ್ ನಾಗರಿಕರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು ನ್ಯಾಯಾಲಯ ವ್ಯಾಪ್ತಿಯನ್ನು ಹೊಂದಿದೆ ಎಂದು ಅಕ್ಟೋಬರ್ 16 ರಂದು ಲೀವಾರ್ಡನ್ ನ್ಯಾಯಾಲಯ ತೀರ್ಪು ನೀಡಿತ್ತು. ಅಷ್ಟೇ ಅಲ್ಲ. ಗೇಟ್ಸ್ ಮತ್ತು ಇತರ ಪ್ರತಿವಾದಿಗಳ ವಿರುದ್ಧವಿರುವ ಆರೋಪಗಳು ನೇರ ಸಂಪರ್ಕ ಹೊಂದಿದ್ದು, ಈ ಕಾರಣದಿಂದಲೂ ನ್ಯಾಯಾಲಯಕ್ಕೆ ವ್ಯಾಪ್ತಿ ಇರುವುದಾಗಿ ಲೀವಾರ್ಡನ್ ನ್ಯಾಯಾಲಯದ ತೀರ್ಪು ಹೇಳುತ್ತದೆ.

ಗೇಟ್ಸ್ ಈಗ ಸರಿಸುಮಾರು 1,406 ಯುರೋ ಕಾನೂನು ಶುಲ್ಕ ನೀಡಬೇಕಿದೆ ಎಂದು ʼದಿ ಆಂಡೆರೆ ಕ್ರಾಂಟ್ʼ ವರದಿ ಹೇಳುತ್ತದೆ.

ಗೇಟ್ಸ್ ಮತ್ತು ಇತರ ಅಧಿಕಾರಿಗಳು ಲಸಿಕೆಯನ್ನು ಅದರ ಅಪಾಯಗಳ ಬಗ್ಗೆ ಸಾಕಷ್ಟು ಪಾರದರ್ಶಕತೆ ಇಲ್ಲದೆ ಪ್ರಚಾರ ಮಾಡಿದ್ದಾರೆ ಎಂಬುದು ದೂರುದಾರರ ಪ್ರಾಥಮಿಕ ಆರೋಪವಾಗಿರುವುದಾಗಿ cairnsnews.com ಮತ್ತು ʼದಿ ಡಿಫೆಂಡರ್‌ʼ ವರದಿ ಹೇಳುತ್ತದೆ.

ಬಿಲ್ ಗೇಟ್ಸ್‌ನ ಪ್ರತಿಷ್ಠಾನವು ಜಾಗತಿಕವಾಗಿ ಮತ್ತು ನೆದರ್‌ಲ್ಯಾಂಡ್‌ನಲ್ಲಿ COVID-19 ನೀತಿಗಳನ್ನು ರೂಪಿಸುವಲ್ಲಿ ಪಾತ್ರ ವಹಿಸಿದೆ ಎಂದು ದೂರುದಾರರು ವಾದಿಸುತ್ತಿರುವುದಾಗಿ ಡಚ್ ಸ್ವತಂತ್ರ ಪತ್ರಕರ್ತೆ ಎರಿಕಾ ಕ್ರಿಕೆ ದಿ ಡಿಫೆಂಡರ್‌ಗೆ ಹೇಳಿದ್ದಾರೆ.

ಪ್ರತಿವಾದಿಗಳು ಲಸಿಕೆ ಸುರಕ್ಷತೆಯ ಬಗ್ಗೆ ತಪ್ಪುದಾರಿಗೆಳೆದಿದ್ದಾರೆ ಮತ್ತು ಈ ಆಪಾದಿತ ತಪ್ಪು ಮಾಹಿತಿಯಿಂದ ಹಾನಿ ಉಂಟಾಗಿವೆ ಎಂದು ದೂರುದಾರರು ಹೇಳಿಕೊಳ್ಳುತ್ತಿದ್ದಾರೆ.

ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ನೆಲೆಸಿರುವ ದೇಶದ ಅತಿ ದೊಡ್ಡ ಕಾನೂನು ಸಂಸ್ಥೆಯಾದ ಪೆಲ್ಸ್ ರಿಜ್‌ಕೆನ್‌ ಗೇಟ್ಸ್ ಅನ್ನು ಪ್ರತಿನಿಧಿಸುತ್ತಿರುವುದಾಗಿ cairnsnews.com ವರದಿಯು ಹೇಳುತ್ತದೆ.

ಆರೋಪಗಳ ಆಧಾರದ ಮೇಲೆ ವಾದಿಸದ ಸಂಸ್ಥೆಯು, ನ್ಯಾಯಾಲಯದ ವ್ಯಾಪ್ತಿಯನ್ನು ಪ್ರಶ್ನಿಸಿತ್ತು. ಆದರೆ ಅದರಲ್ಲಿ ಸಫಲತೆ ಖಂಡಿಲ್ಲ. ಫೈಝರ್‌ನ ಡಾ. ಬೌರ್ಲಾ ಸೇರಿದಂತೆ ಇತರ ಪ್ರತಿವಾದಿಗಳು ಡಚ್ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಲಿಲ್ಲ.

ಸೆಪ್ಟೆಂಬರ್ 18 ರ ವಿಚಾರಣೆಯ ಸಮಯದಲ್ಲಿ, ದೂರುದಾರರ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ನೀಡಲಾಗಿತ್ತು. ವ್ಯಾಕ್ಸಿನೇಷನ್‌ನಿಂದ ಉಂಟಾದ ಆರೋಗ್ಯದ ತೊಂದರೆಗಳಿಂದಾಗಿ ಮಾತನಾಡಲು ಸಾಧ್ಯವಾಗದ ದೂರುದಾರರೊಬ್ಬರು ತಮ್ಮ ತಂದೆ ಮೂಲಕ ಕ್ಷೀಣಿಸುತ್ತಿರುವ ತಮ್ಮ ಆರೋಗ್ಯದ ಬಗ್ಗೆ ಭಾವನಾತ್ಮಕ ವಿವರಣೆಯನ್ನು ಕೋರ್ಟ್ ಮುಂದೆ ಹೇಳಿರುವುದನ್ನು ಜೀಬ್ರಾ ಇನ್ಸ್ಪಿರೇಟಿಯ ವರದಿ ಮಾಡಿದೆ.

ಈ ರೀತಿ ವೈಯಕ್ತಿಕ ಹೇಳಿಕೆಗಳು ಕಾನೂನು ಪ್ರಕ್ರಿಯೆಗಳ ಮೇಲೆ ಮತ್ತು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿರುವುದಾಗಿ ವರದಿಯಾಗಿದೆ. ಈ ಸಾಕ್ಷ್ಯವು ನ್ಯಾಯಾಧೀಶರಿಂದ ಬಂದ ಆದೇಶಕ್ಕೆ ಕಾರಣವಾಯಿತು ಎಂದು ಎರಿಕಾ ಕ್ರಿಕೆ ದಿ ಡಿಫೆಂಡರ್‌ಗೆ ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ (WEF) "ಗ್ರೇಟ್ ರೀಸೆಟ್" ಕಾರ್ಯಸೂಚಿಗೆ ಪ್ರತಿವಾದಿಗಳ ಬೆಂಬಲವು ಅವರ ಕ್ರಿಯೆಗಳ ಮೇಲೆ ಪ್ರಭಾವ ಬೀರಿರಬಹುದು. ಜಾಗತಿಕ COVID-19 ವ್ಯಾಕ್ಸಿನೇಷನ್ ಅಭಿಯಾನದ ಬಗ್ಗೆ ಈ ಪ್ರಕರಣವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ದೂರುದಾರರು ವಾದಿಸುತ್ತಾರೆ.

COVID-19 ಸಾಂಕ್ರಾಮಿಕ ಸೇರಿದಂತೆ ಬಿಕ್ಕಟ್ಟುಗಳನ್ನು ನಿರ್ವಹಿಸಲು "ಕೇಂದ್ರೀಕೃತ, ಜಾಗತಿಕ ಮಧ್ಯಸ್ಥಿಕೆ" ಗಾಗಿ ಪ್ರತಿಪಾದಿಸುವ WEF ನೊಂದಿಗೆ ಗೇಟ್ಸ್ ಫೌಂಡೇಶನ್‌ನ ಸಂಬಂಧದ ಉಲ್ಲೇಖಗಳನ್ನು ಲೀವಾರ್ಡನ್ ನ್ಯಾಯಾಲಯದ ತೀರ್ಪು ಒಳಗೊಂಡಿದೆ.

ಈ ಪ್ರಕರಣವನ್ನು ನಿಕಟವಾಗಿ ಅನುಸರಿಸಿದ ನ್ಯೂಝಿಲ್ಯಾಂಡ್ ಮೂಲದ ಸ್ವತಂತ್ರ ಪತ್ರಕರ್ತ ಪೆನ್ನಿ ಮೇರಿ ಅವರ ಮಾತನ್ನೂ ಡಿಫೆಂಡರ್ ಉಲ್ಲೇಖಿಸಿದೆ. ವಿಶ್ವಾದ್ಯಂತ ಇದೇ ರೀತಿಯ ಮೊಕದ್ದಮೆಗಳಿಗೆ ಒಂದು ಪೂರ್ವನಿದರ್ಶನವನ್ನು ಈ ಪ್ರಕರಣವನ್ನು ಮುಂದುವರಿಸಲು ಡಚ್ ನ್ಯಾಯಾಲಯದ ನಿರ್ಧಾರವು ಕೊಡುತ್ತದೆ ಎಂದು ಮೇರಿ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ದೊಡ್ಡ ಪ್ರಮಾಣದ ಸಾರ್ವಜನಿಕ ಆರೋಗ್ಯ ನೀತಿಗಳಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕ್ರಮಗಳಿಗೆ ಮತ್ತು ಮೊಕದ್ದಮೆಗಳಿಗೆ ಈ ತೀರ್ಪು ದಾರಿ ತೆರೆಯುತ್ತದೆ. ಸ್ಥಳೀಯವಾಗಿ ನೆಲೆಗೊಂಡಿಲ್ಲದಿದ್ದರೂ ಸಹ, ಆಯಾ ದೇಶಗಳಲ್ಲಿ ಅಂತರರಾಷ್ಟ್ರೀಯ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲು ಇತರ ದೂರುದಾರರ ಪ್ರಯತ್ನಗಳನ್ನು ತೀರ್ಪು ಬೆಂಬಲಿಸಬಹುದು ಎಂದು ಮೇರಿ ಹೇಳುತ್ತಾರೆ.

ಈ ಮೊಕದ್ದಮೆಯು ಬಿಲ್ ಗೇಟ್ಸ್ ಸೇರಿದಂತೆ ಜಾಗತಿಕ ವ್ಯಕ್ತಿಗಳ ವಿರುದ್ಧ ಲಸಿಕೆ ಹಾನಿ ಆರೋಪ ಪ್ರಕರಣ ನ್ಯಾಯಾಲಯದಲ್ಲಿ ಮುಂದುವರಿದ ಅಪರೂಪದ ನಿದರ್ಶನವಾಗಿದೆ ಎಂದು cairnsnews.com ವರದಿ ಹೇಳುತ್ತದೆ.

ಆದರೆ, ನೆದರ್ಲ್ಯಾಂಡ್ಸ್ ನಲ್ಲಿ COVID-19 ನೀತಿಗಳಿಗೆ ಸಂಬಂಧಿಸಿದ ಹಿಂದಿನ ಮೊಕದ್ದಮೆಗಳು ಸೀಮಿತ ಯಶಸ್ಸನ್ನು ಕಂಡಿವೆ ಎಂದು ಡಚ್ ಅಟಾರ್ನಿ ಮೈಕ್ ಟೆರ್ಹೋರ್ಸ್ ಹೇಳುತ್ತಾರೆ.

ನೆದರ್‌ಲ್ಯಾಂಡ್ಸ್‌ನ ಅನೇಕ ನ್ಯಾಯಾಧೀಶರು ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಾರೆ. ಇದು ಈ ಪ್ರಕರಣದ ಫಲಿತಾಂಶಕ್ಕೆ ಸವಾಲುಗಳನ್ನು ಹಾಕಲಿದೆ ಎಂದು ಅವರು ಹೇಳುತ್ತಾರೆ.

ಲಸಿಕೆ ಪಡೆದ ಕೆಲವು ವ್ಯಕ್ತಿಗಳು ರಿಪೋರ್ಟ್ ಮಾಡಿರುವ ಶ್ರಿನ್ಗಲ್ಸ್ ಕಾಯಿಲೆಯು ಲಸಿಕೆಗೆ ಸಂಬಂಧಿಸಿದ್ದಾಗಿರಬಹುದು ಎಂಬ ಅಂಶವನ್ನು ತಮ್ಮ COVID-19 mRNA ದಾಖಲೆಗಳಲ್ಲಿ ಫೈಝರ್ ಒಪ್ಪಿಕೊಂಡಿದ್ದನ್ನು cairnsnews.com ಮತ್ತು ದಿ ಡಿಫೆಂಡರ್ ತಮ್ಮ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.

ಆಗಸ್ಟ್ 14, 2024 ರಂದು ಶ್ರಿನ್ಗಲ್ಸ್ ಕಾಯಿಲೆಯು ಮಂಕಿಪಾಕ್ಸ್‌ನಂತೆಯೇ ಆಗಿದ್ದು, ಈ ವೈರಸ್ ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News