ದೋಣಿ ದುರಂತ: ಕನಿಷ್ಠ 17 ರೋಹಿಂಗ್ಯಗಳು ಮೃತ್ಯು

Update: 2023-08-10 18:18 GMT

PHOTO: NDTV 

ಯಾಂಗೊನ್: ಮ್ಯಾನ್ಮಾರ್ನ ರಾಖೈನ್ ರಾಜ್ಯದಿಂದ ಪರಾರಿಯಾಗುತ್ತಿದ್ದ ರೋಹಿಂಗ್ಯ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಒಡೆದುಹೋಗಿ, ಕನಿಷ್ಠ 17 ಮಂದಿ ಸಮುದ್ರಪಾಲಾಗಿದ್ದಾರೆ.

ಸಾವಿರಾರು ರೋಹಿಂಗ್ಯಗಳು ಆಶ್ರಯ ಹಾಗೂ ಉದ್ಯೋಗಗಳನ್ನು ಅರಸಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾದ ಮಲೇಶ್ಯ ಹಾಗೂ ಇಂಡೊನೇಶ್ಯಗಳನ್ನು ತಲುಪಲು ಪ್ರತಿ ವರ್ಷವೂ ತಮ್ಮ ಜೀವದ ಹಂಗುತೊರೆದು ಪ್ರಕ್ಷುಬ್ಧವಾದ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದಾರೆ.

ಮಲೇಶ್ಯದೆಡೆಗೆ ಪ್ರಯಾಣಿಸುತ್ತಿತ್ತೆನ್ನಲಾದ ಈ ದೋಣಿಯಲ್ಲಿ 50ಕ್ಕೂ ಅಧಿಕ ಮಂದಿಯಿದ್ದರೆಂದು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿರುವ ಸಿಟ್ವೆ ನಗರದ ಸೇವಾ ಪ್ರತಿಷ್ಠಾನವೊಂದರ ಕಾರ್ಯಕರ್ತ ಬ್ಯಾರ್ ಲಾ ತಿಳಿಸಿದ್ದಾರೆ. ರವಿವಾರ ರಾತ್ರಿ ಈ ದೋಣಿಯು ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿತೆಂದು ಅವರು ಹೇಳಿದ್ದಾರೆ.

ಬುಧವಾರದಂದು 17 ಮೃತದೇಹಗಳು ಪತ್ತೆಯಾಗಿರುವುದಾಗಿ ಅವರು ಹೇಳಿದ್ದಾರೆ. ದೋಣಿಯಲ್ಲಿದ್ದವರಲ್ಲಿ ಎಂಟು ಮಂದಿ ಬದುಕುಳಿದಿದ್ದು ಪೊಲೀಸರು ಅವರನ್ನು ಪ್ರಶ್ನಿಸುತ್ತಿದ್ದಾರೆ.

ದೋಣಿಯಲ್ಲಿದ್ದ ಪ್ರಯಾಣಿಕರ ನಿಖರ ಸಂಖ್ಯೆ ತಿಳಿದುಬಂದಿಲ್ಲವಾದರೂ, ಬದುಕುಳಿದಿರಬಹುದಾದವರಿಗಾಗಿ ರಕ್ಷಣಾ ಕಾರ್ಯಕರ್ತರು ಇನ್ನೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

2017ರಲ್ಲಿ ಮ್ಯಾನ್ಮಾರ್ ಸೇನೆಯ ಬರ್ಬರವಾದ ದಮನಕಾರ್ಯಾಚರಣೆಯಿಂದಾಗಿ ಸಂತ್ರಸ್ತರಾದ 7.50 ಲಕ್ಷಕ್ಕೂ ಅಧಿಕ ರೋಹಿಂಗ್ಯಗಳು ರಾಖೈನ್ ಪ್ರಾಂತವನ್ನು ತೊರೆದು ನೆರೆಯ ಬಾಂಗ್ಲಾ ದೇಶಕ್ಕೆ ಪಲಾಯನಗೈದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News