ದಕ್ಷಿಣ ಕೊರಿಯಾ | ಉಸ್ತುವಾರಿ ಅಧ್ಯಕ್ಷರ ದೋಷಾರೋಪಣೆ ನಿರ್ಣಯಕ್ಕೆ ಸಂಸತ್ ಅನುಮೋದನೆ

Update: 2024-12-27 16:09 GMT

ಸಾಂದರ್ಭಿಕ ಚಿತ್ರ | PC : PTI\AP

 ಸಿಯೋಲ್ : ದಕ್ಷಿಣ ಕೊರಿಯಾದಲ್ಲಿ ವಿಪಕ್ಷಗಳು ಬಹುಮತ ಹೊಂದಿರುವ ರಾಷ್ಟ್ರೀಯ ಸಂಸತ್ತು ಉಸ್ತುವಾರಿ ಅಧ್ಯಕ್ಷ ಹ್ಯಾನ್ ಡಕ್‍ ಸೂ ಅವರನ್ನು ದೋಷಾರೋಪಣೆ ಮಾಡುವ ನಿರ್ಣಯವನ್ನು 192-0 ಮತಗಳಿಂದ ಅನುಮೋದಿಸಿದೆ. ಆಡಳಿತಾರೂಢ ಪಕ್ಷ ಮತದಾನವನ್ನು ಬಹಿಷ್ಕರಿಸಿತ್ತು.

ಮಿಲಿಟರಿ ಕಾನೂನನ್ನು ಜಾರಿಗೊಳಿಸಿದ್ದ ಅಧ್ಯಕ್ಷ ಯೂನ್ ಸುಕ್ ಯೆಯೋಲ್‍ ರನ್ನು ಎರಡು ವಾರದ ಹಿಂದೆ ದೋಷಾರೋಪಣೆಗೆ ಗುರಿಪಡಿಸಿ, ಅವರ ಅಧಿಕಾರವನ್ನು ಅಮಾನತುಗೊಳಿಸಿದ ಬಳಿಕ ಪ್ರಧಾನಿ ಹ್ಯಾನ್ ಡಕ್‍ ಸೂ ಅವರನ್ನು ಉಸ್ತುವಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದೀಗ ಉಸ್ತುವಾರಿ ಅಧ್ಯಕ್ಷರೂ ದೋಷಾರೋಪಣೆಗೆ ಗುರಿಯಾದರೆ ಅವರ ಅಧಿಕಾರವೂ ಮೊಟಕುಗೊಂಡು ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಲಿದೆ.

300 ಸದಸ್ಯ ಬಲದ ಸಂಸತ್‍ನಲ್ಲಿ ಅಧ್ಯಕ್ಷರ ವಿರುದ್ಧದ ದೋಷಾರೋಪಣೆ ನಿರ್ಣಯ ಅನುಮೋದನೆಗೊಳ್ಳಲು ಮೂರನೇ ಎರಡರಷ್ಟು ಬಹುಮತ ಅಂದರೆ 200 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ ಉಸ್ತುವಾರಿ ಅಧ್ಯಕ್ಷರ ವಿರುದ್ಧದ ನಿರ್ಣಯಕ್ಕೆ ಸರಳ ಬಹುಮತ ಸಾಕು. ಆದ್ದರಿಂದ 192 ಸದಸ್ಯರ ಬೆಂಬಲ ಪಡೆದಿರುವ ನಿರ್ಣಯ ಅನುಮೋದನೆಗೊಂಡಿದೆ ಎಂದು ಸ್ಪೀಕರ್ ವೂ ವುನ್‍ಶಿಕ್ ಘೋಷಿಸಿದರು.

ಆಡಳಿತಾರೂಢ ಪೀಪಲ್ಸ್ ಪವರ್ ಪಾರ್ಟಿಯ ಸದಸ್ಯರು ನಿರ್ಣಯದ ಮೇಲಿನ ಮತದಾನ ಕಾನೂನು ಬಾಹಿರ ಎಂದು ಪ್ರತಿಭಟನೆ ನಡೆಸಿದರು ಮತ್ತು ಸ್ಪೀಕರ್ ಪದಚ್ಯುತಿಗೆ ಆಗ್ರಹಿಸಿದರು ಎಂದು ವರದಿಯಾಗಿದೆ.

 ಸಾಂಗ್ ಮೋಕ್ ನೂತನ ಉಸ್ತುವಾರಿ ಅಧ್ಯಕ್ಷ 

 ಹಾಲಿ ಉಸ್ತುವಾರಿ ಅಧ್ಯಕ್ಷ ಹ್ಯಾನ್ ಡುಕ್‍ಸೂ ಅವರನ್ನು ದೋಷಾರೋಪಣೆಗೆ ಗುರಿಪಡಿಸುವ ನಿರ್ಣಯವನ್ನು ದಕ್ಷಿಣ ಕೊರಿಯಾ ಸಂಸತ್ತು ಅನುಮೋದಿಸಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವ ಚೋಯ್ ಸಾಂಗ್ ಮೋಕ್ ಅವರು ಎರಡನೇ ಉಸ್ತುವಾರಿ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ.

ಸಾಂವಿಧಾನಿಕ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಿಸುವ ವಿಷಯದಲ್ಲಿ ವಿಪಕ್ಷಗಳ ಜತೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಹ್ಯಾನ್ ಡುಕ್‍ಸೂ ಅವರನ್ನು ದೋಷಾರೋಪಣೆಗೆ ಗುರಿಪಡಿಸಲು ದಕ್ಷಿಣ ಕೊರಿಯಾ ಸಂಸತ್ತು ಅನುಮೋದನೆ ನೀಡಿದೆ. 

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News