ಗಾಝಾದ ಆಸ್ಪತ್ರೆಗೆ ಬೆಂಕಿ ಹಚ್ಚಿದ ಇಸ್ರೇಲ್ ಪಡೆ: ವರದಿ
ಗಾಝಾ ಪಟ್ಟಿ : ಉತ್ತರ ಗಾಝಾದ ಕಮಲ್ ಅಡ್ವಾನ್ ಆಸ್ಪತ್ರೆಗೆ ಶುಕ್ರವಾರ ನುಗ್ಗಿದ ಇಸ್ರೇಲಿ ಪಡೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಗಳನ್ನು ಬಲವಂತದಿಂದ ತೆರವುಗೊಳಿಸಿ ಆಸ್ಪತ್ರೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಆಸ್ಪತ್ರೆಯ ಆವರಣಕ್ಕೆ ಬರುವಂತೆ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದ ಇಸ್ರೇಲಿ ಪಡೆ, ಅವರ ಬಟ್ಟೆಬಿಚ್ಚಿಸಿ ತಪಾಸಣೆ ನಡೆಸಿದೆ. ರೋಗಿಗಳನ್ನು ಸಮೀಪದ ಇಂಡೋನೇಶ್ಯಾ ಆಸ್ಪತ್ರೆಗೆ ಸ್ಥಳಾಂತರಿಸಿದರೆ, ಸಿಬ್ಬಂದಿಗಳಿಗೆ ಆಸ್ಪತ್ರೆಯಿಂದ ಹೊರ ತೆರಳುವಂತೆ ಸೂಚಿಸಿ ಆಸ್ಪತ್ರೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿದೆ ಎಂದು ಮೂಲಗಳು ಹೇಳಿವೆ.
ಆಸ್ಪತ್ರೆಯ ಒಳಗೆ ಹಮಾಸ್ ಕಾರ್ಯಕರ್ತರು ಇರುವ ಬಗ್ಗೆ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ದಾಳಿಯಲ್ಲಿ ಗಾಝಾ ಆಸ್ಪತ್ರೆಯ 5 ಸಿಬ್ಬಂದಿ ಮೃತ್ಯು
ಉತ್ತರ ಗಾಝಾದ ಬೀಟ್ ಲಾಹಿಯಾದ ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಆಸ್ಪತ್ರೆಯ ಐವರು ಸಿಬ್ಬಂದಿಗಳು ಮೃತಪಟ್ಟಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.
ಉತ್ತರ ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ. ಮಧ್ಯ ಗಾಝಾ ಪಟ್ಟಿಯಲ್ಲಿ ವೈರಿಗಳ ದಾಳಿಯಲ್ಲಿ ಯೋಧನೊಬ್ಬ ಸಾವನ್ನಪ್ಪಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.