ಗ್ರೀಕ್ ಬಳಿ ವಲಸಿಗರ ದೋಣಿ ಮುಳುಗಿ ಇಬ್ಬರು ಮೃತ್ಯು
Update: 2024-10-21 15:50 GMT
ಅಥೆನ್ಸ್: ಗ್ರೀಕ್ ದ್ವೀಪವಾದ ಸಮೋಸ್ ಬಳಿ ವಲಸಿಗರು ಪ್ರಯಾಣಿಸುತ್ತಿದ್ದ ದೋಣಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ 22 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲುಪಡೆ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಸಮೋಸ್ ದ್ವೀಪದ ಉತ್ತರದ ಏಜಿಯನ್ ಸಮುದ್ರದಲ್ಲಿ ದೋಣಿಯೊಂದು ಅರ್ಧ ಮುಳುಗಿದ ಸ್ಥಿತಿಯಲ್ಲಿರ ಬಗ್ಗೆ ಗಸ್ತು ದೋಣಿ ಮಾಹಿತಿ ರವಾನಿಸಿದೆ. ತಕ್ಷಣ ಕರಾವಳಿ ಕಾವಲುಪಡೆಯ ದೋಣಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು 20 ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಓರ್ವ ಮಹಿಳೆ ಮತ್ತು ಓರ್ವ ಪುರುಷನ ಮೃತದೇಹ ಪತ್ತೆಯಾಗಿದೆ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರರು ಹೇಳಿದ್ದಾರೆ. ಉತ್ತರ ಆಫ್ರಿಕಾದಿಂದ ಯುರೋಪಿಯನ್ ಯೂನಿಯನ್ ತಲುಪಲು ವಲಸಿಗರು ಮೆಡಿಟರೇನಿಯನ್ ಜಲಮಾರ್ಗವನ್ನು ಹೆಚ್ಚಾಗಿ ಬಳಸುತ್ತಾರೆ.