ಬ್ರಿಟನ್: ಮಾದಕ ವಸ್ತುಗಳ ವ್ಯವಹಾರ; ಭಾರತೀಯ ಮೂಲದ ಮಹಿಳೆಗೆ 7 ವರ್ಷ ಜೈಲುಶಿಕ್ಷೆ
Update: 2023-06-27 11:04 GMT
ಲಂಡನ್: ಬ್ರಿಟನ್ನಲ್ಲಿ ಮಾದಕ ವಸ್ತುಗಳ ವ್ಯವಹಾರಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಕೆ ಮಾಡಿಕೊಂಡ ಅಪರಾಧಕ್ಕೆ ಭಾರತೀಯ ಮೂಲದ ಮಹಿಳೆ ಸಹಿತ 7 ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದಾರೆ.
ಲಂಡನ್ ಮತ್ತು ಬರ್ಮಿಂಗ್ಹಾಮ್ ಸುತ್ತಮುತ್ತ ನಡೆಯುತ್ತಿರುವ ಮಾದಕ ವಸ್ತು ವ್ಯವಹಾರವನ್ನು ನಿಯಂತ್ರಿಸುತ್ತಿರುವ ಜಾಲದ ಸದಸ್ಯೆಯಾದ 28 ವರ್ಷದ ಸರಿನಾ ದುಗ್ಗಲ್ ಸಹಿತ 6 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ವಿಚಾರಣೆಯ ಬಳಿಕ ತೀರ್ಪು ಹೊರಬಿದ್ದಿದೆ. ಕಳೆದ ವರ್ಷದ ಜುಲೈ 16ರಂದು ಫಾರ್ನ್ಬೊರೋದಲ್ಲಿ 16 ವರ್ಷದ ಬಾಲಕನ್ನು ಭಾರೀ ಪ್ರಮಾಣದ ಮಾದಕವಸ್ತು ಸಹಿತ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದರು. ವಿಚಾರಣೆ ಸಂದರ್ಭ ಮಾದಕವಸ್ತು ಜಾಲದ ಬಗ್ಗೆ ವಿವರ ದೊರಕಿದೆ ಎಂದು ಪೊಲೀಸರು ಹೇಳಿದ್ದಾರೆ.