ಬ್ರಿಟನ್: ಪ್ರತಿಭಟನೆ ವಿರೋಧಿ ಕಾಯ್ದೆಗೆ ಲಂಡನ್ ಹೈಕೋರ್ಟ್ ತಡೆ
Update: 2024-05-21 16:56 GMT
ಲಂಡನ್ : ಪ್ರತಿಭಟನೆಯನ್ನು ಚದುರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಬ್ರಿಟನ್ ಸರಕಾರದ `ಪ್ರತಿಭಟನೆ ವಿರೋಧಿ ಕಾಯ್ದೆʼ ಕಾನೂನುಬಾಹಿರ ಎಂದು ಲಂಡನ್ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಸಾರ್ವಜನಿಕ ಸುವ್ಯವಸ್ಥೆ ಕಾಯ್ದೆಗೆ ಕಳೆದ ವರ್ಷ ಬ್ರಿಟನ್ ಸರಕಾರ ತಿದ್ದುಪಡಿ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರಿಗೆ ಬಹುತೇಕ ಅನಿಯಮಿತ ಅಧಿಕಾರ ನೀಡಿರುವುದನ್ನು ವಿರೋಧಿಸಿ ನಾಗರಿಕ ಹಕ್ಕುಗಳಿಗಾಗಿ ಹೋರಾಡುವ `ಲಿಬರ್ಟಿ' ಲಂಡನ್ ಹೈಕೋರ್ಟ್‍ಗೆ ಅರ್ಜಿ ದಾಖಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪೊಲೀಸರಿಗೆ ಬಹುತೇಕ ಅನಿಯಮಿತ ಅಧಿಕಾರ ಒದಗಿಸುವ ಹೊಸ ಕಾಯ್ದೆಯು ಕಾನೂನುಬಾಹಿರ ಎಂದು ತೀರ್ಪು ನೀಡಿದ್ದಾರೆ. ಜತೆಗೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರಕಾರಕ್ಕೆ ಅವಕಾಶ ನೀಡಿದೆ ಮತ್ತು ಮೇಲ್ಮನವಿಯ ತೀರ್ಪು ಹೊರಬೀಳುವ ತನಕ ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬ ಆದೇಶ ಅಮಾನತಿನಲ್ಲಿರುತ್ತದೆ ಎಂದು ಆದೇಶಿಸಿದೆ.