ಬ್ರಿಟನ್: ಆಡಳಿತಾರೂಢ ಪಕ್ಷದ ಸಂಸದೆ ರಾಜೀನಾಮೆ; ಪ್ರಧಾನಿ ರಿಷಿ ಸುನಕ್ ವಿರುದ್ಧ ತೀವ್ರ ವಾಗ್ದಾಳಿ
ಲಂಡನ್, ಆ.27: ಬ್ರಿಟನ್‍ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯೆ ನ್ಯಾಡಿನ್ ಡೊರೆಸ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪ್ರಧಾನಿ ರಿಷಿ ಸುನಕ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ರಿಷಿ ಸುನಕ್ ನಿಷ್ಕ್ರಿಯ ಸಂಸತ್ ಅನ್ನು ನಡೆಸುತ್ತಿದ್ದು ಯಾವುದೇ ರಾಜಕೀಯ ದೂರದೃಷ್ಟಿಯನ್ನು ಹೊಂದಿಲ್ಲ. ಸುಮಾರು 1 ವರ್ಷ ಅಧಿಕಾರದಲ್ಲಿರುವ ನೀವು ಯಾವುದೇ ಅರ್ಥಪೂರ್ಣ ಕಾರ್ಯ ನಿರ್ವಹಿಸಿಲ್ಲ. ನಿಮ್ಮ ಸಾಧನೆ ಏನು ? ನೀವು ಒಂದೇ ಒಂದು ಮತ ಪಡೆಯದೆ, ನಿಮ್ಮ ಸ್ವಂತ ಸಂಸದರಿಂದಲೂ ಆಯ್ಕೆಯಾಗದೆ ಪ್ರಧಾನಿ ಹುದ್ದೆಯನ್ನು ಹೊಂದಿದ್ದೀರಿ. ನಿಮಗೆ ಜನಾದೇಶವಿಲ್ಲ ಮತ್ತು ಸರಕಾರ ಗೊತ್ತುಗುರಿಯಿಲ್ಲದೆ ನಡೆಯುತ್ತಿದೆ. ನೀವು ರಾಷ್ಟ್ರದ ಅಭಿಮಾನವನ್ನು ಹಾಳು ಮಾಡಿದ್ದೀರಿ' ಎಂದು ದೀರ್ಘವಾದ ಪತ್ರದ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಕಟ ಮಿತ್ರರಾಗಿರುವ ಡೋರಿಸ್, ಕಳೆದ ಜೂನ್‍ನಲ್ಲೇ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ರಾಜೀನಾಮೆ ನೀಡದಿರುವುದಕ್ಕೆ ವ್ಯಾಪಕ ಟೀಕೆ ಎದುರಿಸಿದ್ದರು. ಜೂನ್‍ನಲ್ಲಿ ರಾಜೀನಾಮೆ ನೀಡಿದ್ದರೆ ಜುಲೈಯಲ್ಲಿ ಇತರ ಮೂರು ಕ್ಷೇತ್ರಗಳ ಉಪಚುನಾವಣೆಯ ಜತೆಗೇ ಡೋರಿಸ್ ಪ್ರತಿನಿಧಿಸುವ ಸಂಸದೀಯ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಅನುಕೂಲವಾಗುತ್ತಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.