ಬ್ರಿಟನ್ : ಅಕ್ರಮ ವಲಸೆ ತಡೆಗೆ ಸಾಮಾಜಿಕ ಮಾಧ್ಯಮ ಪಾಲುದಾರಿಕೆ ಯೋಜನೆ

Update: 2023-08-07 16:09 GMT

Photo : ರಿಷಿ ಸುನಾಕ್ | PTI

ಲಂಡನ್ : ಬ್ರಿಟನ್ ಪ್ರವೇಶಕ್ಕೆ ಕಾನೂನು ಬಾಹಿರ ಕಡಲ ಮಾರ್ಗದ ಮಾಹಿತಿಯನ್ನು ಅಪರಾಧಿಗಳು ಆನ್ಲೈನ್ನಲ್ಲಿ ಹಂಚಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳ ನಡುವೆ ಸ್ವಯಂಪ್ರೇರಿತ ಪಾಲುದಾರಿಕೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅನಾವರಣಗೊಳಿಸಿದ್ದಾರೆ.

ಮಾನವ ಕಳ್ಳಸಾಗಣೆದಾರರು ಅಕ್ರಮ ವಲಸಿಗರಿಂದ ಭಾರೀ ಮೊತ್ತವನ್ನು ಪಡೆದು ದೋಣಿಗಳ ಮೂಲಕ ಅಪಾಯಕಾರಿ ರೀತಿಯಲ್ಲಿ ಬ್ರಿಟನ್ ನತ್ತ ಸಾಗಿಸುವುದನ್ನು ನಿರ್ಬಂಧಿಸುವ ತನ್ನ ಮಹಾತ್ವಾಕಾಂಕ್ಷೆಯ `ಸ್ಟಾಪ್ ದಿ ಬೋಟ್' ಯೋಜನೆಗೆ ಈ ಕ್ರಮ ಪೂರಕವಾಗಲಿದೆ ಎಂದು ಸುನಕ್ ಹೇಳಿದ್ದಾರೆ. ಮಾನವ ಕಳ್ಳಸಾಗಣೆದಾರರು ಆನ್ಲೈನ್ ವೇದಿಕೆಯನ್ನು ಬಳಸಿಕೊಂಡು `ರಿಯಾಯ್ತಿ ದರ, ಮಕ್ಕಳಿಗೆ ಉಚಿತ ಅವಕಾಶ, ನಕಲಿ ಪ್ರಯಾಣ ದಾಖಲೆ ಪತ್ರ ಒದಗಿಸುವುದು, ಸುರಕ್ಷಿತ ಪ್ರಯಾಣ' ಮುಂತಾದ ಆಮಿಷಗಳನ್ನು ಘೋಷಿಸುತ್ತಿದ್ದು ಇದನ್ನು ನಿರ್ಬಂಧಿಸಲು ಆದ್ಯತೆ ನೀಡಲಾಗುವುದು. ಇಂತಹ ಘೋಷಣೆಗಳಿಗೆ ಹೆಚ್ಚಾಗಿ ದುರ್ಬಲ ವರ್ಗದವರು ಆಕರ್ಷಿತರಾಗಿ ಅಪಾಯಕಾರಿ ಮತ್ತು ಅಕ್ರಮ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ. ಈ ದೋಣಿಗಳನ್ನು ನಿಲ್ಲಿಸಲು ನಾವು ದುಷ್ಟ ಜನರ ವ್ಯವಹಾರದ ಮೂಲಕ್ಕೇ ಕೊಡಲಿಯೇಟು ನೀಡಬೇಕಾಗಿದೆ. ಅಕ್ರಮ ಮಾರ್ಗದ ಮೂಲಕ ಬ್ರಿಟನ್ ಪ್ರವೇಶಕ್ಕೆ ಜನರಿಗೆ ಆಮಿಷವೊಡ್ಡುವ ಅವರ ಪ್ರಯತ್ನಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ. ಟೆಕ್ ಸಂಸ್ಥೆಗಳ ಈ ಹೊಸ ಬದ್ಧತೆಯು ಈ ಕ್ರಿಮಿನಲ್ಗಳ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತದೆ. ಅವರ ಕೆಟ್ಟ ವ್ಯವಹಾರಗಳನ್ನು ಮುಚ್ಚಲು ಒಗ್ಗೂಡಿ ಕೆಲಸ ಮಾಡಲಿದೆ ' ಎಂದು ಬ್ರಿಟನ್ ಪ್ರಧಾನಿಯ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.

`ಹೃದಯಹೀನ ಮಾನವ ಕಳ್ಳಸಾಗಣೆದಾರರು ತಮ್ಮ ತುಚ್ಛ ಕಾರ್ಯಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ ಮತ್ತು ಅಸುರಕ್ಷಿತ ದೋಣಿಗಳಲ್ಲಿ ಬ್ರಿಟನ್ಗೆ ಪ್ರವೇಶ ಕಲ್ಪಿಸಲು ಸಾವಿರಾರು ಪೌಂಡ್ಗಳನ್ನು ವಿಧಿಸುತ್ತಿದ್ದಾರೆ. ಅವರು ಯಶಸ್ವಿಯಾಗಬಾರದು. ರಾಷ್ಟ್ರೀಯ ಅಪರಾಧ ಸಂಸ್ಥೆ, ಸರಕಾರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳ ನಡುವಿನ ಈ ಬಲಪಡಿಸಿದ ಸಹಯೋಗವು ಅಕ್ರಮ ವ್ಯವಹಾರಕ್ಕೆ ಅಂತ್ಯಹಾಡಲಿದೆ' ಎಂದು ಬ್ರಿಟನ್ನ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರವೆರ್ಮನ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಿದ ಬಳಿಕ ಜನರ ಕಳ್ಳಸಾಗಣೆಗೆ ಸಂಬಂಧಿಸಿದ 90%ದಷ್ಟು ಆನ್ಲೈನ್ ವಿಷಯಗಳನ್ನು ತೆಗೆದು ಹಾಕಲಾಗುವುದು ಎಂದು ಬ್ರಿಟನ್ನ ರಾಷ್ಟ್ರೀಯ ಅಪರಾಧ ಏಜೆನ್ಸಿ(ಎನ್ಸಿಎ) ಹೇಳಿದೆ.

ಹೊಸ ಉಪಕ್ರಮದ ಅಡಿಯಲ್ಲಿ, ಕ್ರಿಮಿನಲ್ ಉದ್ದೇಶದ ವಿಷಯಗಳನ್ನು ತೆಗೆದುಹಾಕಲು ಮತ್ತು ಉತ್ತಮ ವಿಷಯಗಳ ಹಂಚಿಕೆಯಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಎನ್ಸಿಎ ಜತೆಗೆ ಸಹಕಾರವನ್ನು ಹೆಚ್ಚಿಸುವುದನ್ನು ನಿರೀಕ್ಷಿಸಲಾಗಿದೆ. ಈ ಪಾಲುದಾರಿಕೆಯ ಜತೆಗೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಂತಹ ವಿಷಯಗಳನ್ನು ಗುರುತಿಸಲು ಕಾನೂನು ಜಾರಿಯ ಸಾಮಥ್ರ್ಯವನ್ನು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರದ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News