ಚುನಾವಣೆಗೆ ಪೂರ್ವಭಾವಿಯಾಗಿ ಬ್ರಿಟನ್ ಸಂಸತ್ತು ವಿಸರ್ಜನೆ
ಲಂಡನ್: ಬ್ರಿಟನ್ ಸಂಸತ್ತಿಗೆ ಜುಲೈ 4ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಐದು ವಾರಗಳ ಪ್ರಚಾರ ಅವಧಿ ಆರಂಭವಾದ ಬೆನ್ನಲ್ಲೇ ಗುರುವಾರ ಬ್ರಿಟನ್ ಸಂಸತ್ತನ್ನು ವಿಸರ್ಜಿಸಲಾಗಿದೆ.
14 ವರ್ಷಗಳ ಕನ್ಸರ್ವೇಟಿವ್ ಆಡಳಿತದ ಬಳಿಕ ಲೇಬರ್ ಪಕ್ಷವನ್ನು ಈ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸೂಚನೆಗಳು ಕಾಣುತ್ತಿವೆ. ಗುರುವಾರ ಮಧ್ಯರಾತ್ರಿ 12 ಗಂಟೆ ಕಳೆದು ಒಂದು ನಿಮಿಷವಾಗುತ್ತಿದ್ದಂತೆ ಸಂಸತ್ತಿನ ಎಲ್ಲ 650 ಸ್ಥಾನಗಳು ತೆರವಾಗಿವೆ. ಈ ಮೂಲಕ ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.
ಭಾರಿ ಮಳೆಯ ನಡುವೆಯೇ ಪ್ರಧಾನಿ ರಿಷಿ ಸುನಾಕ್ ಅವರು ಚುನಾವಣಾ ಘೋಷಣೆ ಮಾಡಿರುವುದನ್ನು ಹಲವು ಮಂದಿ ಪ್ರಚಾರ ಕಾರ್ಯದ ನಡುಕದ ಆರಂಭ ಎಂದು ವಿಶ್ಲೇಷಿಸಿದ್ದು, ಮತ್ತೆ ಕೆಲವರು ಮಳೆಯನ್ನು ದುರಾದೃಷ್ಟದ ಸಂಕೇತ ಎಂದೂ ಪರಿಗಣಿಸಿದ್ದಾರೆ.
ನಿರೀಕ್ಷೆಗಿಂತ ಮೊದಲೇ ಅಂದರೆ ಜುಲೈ 4ರಂದೇ ಚುನಾವಣೆ ನಡೆಸುವ ಸುನಾಕ್ ನಿರ್ಧಾರಕ್ಕೆ, ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅವರ ಪಕ್ಷದ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದು ಕಂಡುಬಂದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮಾನವ ಹಕ್ಕುಗಳ ಮಾಜಿ ವಕೀಲ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ, ಈ ಅವಕಾಶವನ್ನು ಬಳಸಿಕೊಂಡು 14 ವರ್ಷಗಳ ಬಳಿಕ ಅಧಿಕಾರದ ಕನಸು ಕಾಣುತ್ತಿದೆ.
ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿ, ಸಮೀಕ್ಷೆಗಳಲ್ಲಿ ಲೇಬರ್ ಪಾರ್ಟಿಗಿಂತ ತೀರಾ ಹಿಂದಿರುವುದು ಮಾತ್ರವಲ್ಲದೇ, ಸಂಸದರ ಸಾಮೂಹಿಕ ನಿರ್ಗಮನಕ್ಕೂ ಸಾಕ್ಷಿಯಾಗಿದೆ. 77 ಮಂದಿ ಕನ್ಸರ್ವೇಟಿವ್ ಸಂಸದರು ಸೇರಿದಂತೆ 129 ಮಂದಿ ಮರು ಆಯ್ಕೆ ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಆಡಳಿತ ಪಕ್ಷದ ಸಂಸದರು ಮರು ಆಯ್ಕೆಯ ವಿಶ್ವಾಸ ಹೊಂದಿಲ್ಲ ಎನ್ನುವುದನ್ನು ತೋರಿಸುತ್ತದೆ.