ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ದಯಾ ಮರಣ ವಿಧೇಯಕ | ಬ್ರಿಟನ್ ಸಂಸತ್ ಅನುಮೋದನೆ

Update: 2024-11-30 16:51 GMT

Tower Bridge, London | PC : AP














ಲಂಡನ್ : ಮಾರಣಾಂತಿಕವಾಗಿ ಅನಾರೋಗ್ಯ ಪೀಡಿತರಾಗಿರುವವರಿಗೆ ಜೀವವನ್ನು ಕೊನೆಗೊಳಿಸುವುದಕ್ಕೆ ಅವಕಾಶ ನೀಡುವ ವಿಧೇಯಕಕ್ಕೆ ಬ್ರಿಟಿಷ್ ಸಂಸದರು ಶುಕ್ರವಾರ ಪ್ರಾಥಮಿಕ ಹಂತದ ಅನುಮೋದನೆ ನೀಡಿದ್ದಾರೆ.

ಸಾವಿಗೆ ನೆರವಾಗುವ ವಿಧೇಯಕ (ಅಸಿಸ್ಟೆಡ್ ಡೈಯಿಂಗ್ ಬಿಲ್), ಬ್ರಿಟನ್ ಸಂಸತ್‌ನಲ್ಲಿ 330-275 ಮತಗಳೊಂದಿಗೆ ಶುಕ್ರವಾರ ಅಂಗೀಕಾರಗೊಂಡಿತು. ಆದರೆ ವಿಧೇಯಕವು ಅಂತಿಮ ಹಂತದ ಮತದಾನಕ್ಕೆ ಹೋಗುವ ಮುನ್ನ ಅದು ಇನ್ನಷ್ಟು ಪರಿಶೀಲನೆಗೊಳಪಡಲಿದೆ.

ಶುಕ್ರವಾರ ವಿಧೇಯಕವನ್ನು ಮತಕ್ಕೆ ಹಾಕುವ ಮುನ್ನ ಹಲವು ತಾಸುಗಳವರೆಗೆ ಸುದೀರ್ಘ ಚರ್ಚೆ ನಡೆಯಿತು. ದಯಾಮರಣಕ್ಕೆ ಸಂಬಂಧಿಸಿದಂತೆ ನೈತಿಕತೆ, ನಂಬಿಕೆ ಹಾಗೂ ಕಾನೂನು ಇವುಗಳ ಬಗ್ಗೆಯೂ ಚರ್ಚಿಸಲಾಯಿತು.

ಸಂಸದೆ ಕಿಮ್ ಲೆಡ್‌ಬೀಟರ್ ಅವರು ವಿಧೇಯಕವನ್ನು ಮಂಡಿಸಿ ಮಾತನಾಡುತ್ತಾ, ‘‘ನಾವು ಇಲ್ಲಿ ಬದುಕು ಅಥವಾ ಸಾವು ಇವೆರಡರ ನಡುವಿನ ಆಯ್ಕೆಯ ಬಗ್ಗೆ ಚರ್ಚಿಸುತ್ತಿಲ್ಲ. ಆದರೆ ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಹೇಗೆ ಸಾಯಬೇಕೆಂಬ ಬಗ್ಗೆ ಆಯ್ಕೆಯನ್ನು ನೀಡುವ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದೇವೆ ’’ ಎಂಬುದಾಗಿ ಸ್ಪಷ್ಟಪಡಿಸುತ್ತೇನೆ ಎಂದರು.

ನೂತನ ವಿಧೇಯಕವು ಮರಣಶಯ್ಯೆಯಲ್ಲಿರುವ ವ್ಯಕ್ತಿಗಳಿಗೆ ಘನತೆಯ ಬದುಕನ್ನು ಒದಗಿಸುತ್ತದೆ. ಅವರು ಯಾತನೆಯಿಂದ ನರಳುವುದನ್ನು ತಡೆಯುತ್ತದೆ ಎಂದು ವಿಧೇಯಕದ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ.

ಆದರೆ ನೂತನ ಕಾನೂನು ಜಾರಿಗೆ ಬಂದಲ್ಲಿ, ಬಂಧುಗಳು ಮತ್ತಿತರರು ಹಣ ಉಳಿಸುವುದಕ್ಕಾಗಿ ಅಥವಾ ತಮ್ಮ ಹೊರೆಯನ್ನು ಇಳಿಸುವುದಕ್ಕಾಗಿ, ಅಶಕ್ತರು ಹಾಗೂ ವಯೋವೃದ್ಧರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜೀವವನ್ನು ಕೊನೆಗೊಳಿಸುವಂತೆ ಬೆದರಿಸುವ ಅಪಾಯವಿದೆ ಎಂದು ವಿಧೇಯಕದ ವಿರೋಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News