ವಿದೇಶೀಯರಿಂದ ಮನೆ ಖರೀದಿ ಮೇಲಿನ ನಿಷೇಧ ವಿಸ್ತರಿಸಿದ ಕೆನಡಾ
ಒಟ್ಟಾವ: ವಿದೇಶೀಯರು ಮನೆ ಖರೀದಿಸುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಹೆಚ್ಚುವರಿ 2 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಕೆನಡಾ ಸರಕಾರ ಸೋಮವಾರ ಘೋಷಿಸಿದೆ.
ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುವ ಲಕ್ಷಣ ಕಂಡುಬರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶೀ ಪ್ರಜೆಗಳು ಕೆನಡಾದಲ್ಲಿ ವಸತಿ ಪ್ರದೇಶಗಳನ್ನು ಖರೀದಿಸುವುದಕ್ಕೆ ಪ್ರಧಾನಿ ಜಸ್ಟಿನ್ ಟ್ರೂಡೊ ಸರಕಾರ 2022ರಲ್ಲಿ ನಿಷೇಧ ಹೇರಿತ್ತು ಮತ್ತು ಈ ನಿಷೇಧದ ಅವಧಿ 2025ರ ಜನವರಿ 1ರಂದು ಅಂತ್ಯಗೊಳ್ಳಲಿತ್ತು. ಇದೀಗ ನಿಷೇಧವನ್ನು 2027ರ ಜನವರಿ 1ರವರೆಗೆ ವಿಸ್ತರಿಸಿ ಸರಕಾರ ಆದೇಶ ಜಾರಿಗೊಳಿಸಿದೆ.
ವಿದೇಶಿ ಖರೀದಿಗಾರರ ನಿಷೇಧವನ್ನು ವಿಸ್ತರಿಸುವ ಮೂಲಕ, ಮನೆಗಳು ಕೆನಡಾದ ಕುಟುಂಬಗಳಿಗೆ ವಾಸಸ್ಥಾನಗಳಾಗಿ ಬಳಕೆಗೆ ಬರುವಂತೆ ಖಾತರಿ ಪಡಿಸಲಿದ್ದೇವೆ. ಮನೆ ಖರೀದಿಯನ್ನು ಹಣಕಾಸಿನ ವ್ಯವಹಾರವನ್ನಾಗಿ ಬಳಸುವುದನ್ನು ಇದು ತಡೆಯಲಿದೆ. ಸ್ಥಳೀಯ ಮಾರುಕಟ್ಟೆ ದರವನ್ನು ಮೀರಿ ವಸತಿಗೃಹಗಳ ದರ ಏರಿಕೆಯಾಗುತ್ತಿರುವ ಬಗ್ಗೆ ಸರಕಾರಕ್ಕೆ ಕಳವಳವಿದೆ' ಎಂದು ಕೆನಡಾದ ವಿತ್ತಸಚಿವೆ ಕ್ರಿಸ್ತಿಯಾ ಫ್ರೀಲಾಂಡ್ ಹೇಳಿದ್ದಾರೆ.