ಕೆನಡಾ: ಬಿಗಿ ಬಂದೋಬಸ್ತ್ನಲ್ಲಿ ನಡೆದ ಭಾರತದ ಕಾನ್ಸುಲರ್ ಶಿಬಿರ
ಟೊರಂಟೊ: ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಬೆದರಿಕೆಯ ನಡುವೆಯೇ ಭಾರತದ ರಾಯಭಾರಿ ಕಚೇರಿ ಕೆನಡಾದ್ಯಂತ ಈ ವಾರಾಂತ್ಯ ಆಯೋಜಿಸಿದ್ದ ಕಾನ್ಸುಲರ್ ಶಿಬಿರ ಯಶಸ್ವಿಯಾಗಿ ನಡೆದಿದೆ ಎಂದು ವರದಿಯಾಗಿದೆ.
ಕಾನ್ಸುಲರ್ ಶಿಬಿರ (ಕಾನ್ಸುಲರ್ ಸೇವೆಗಳನ್ನು ಸ್ಥಳದಲ್ಲೇ ಒದಗಿಸುವ ಕಾರ್ಯಕ್ರಮ ಇದಾಗಿದ್ದು ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಭಾರತೀಯ ಸರಕಾರದ ಪಿಂಚಣಿದಾರರಿಗೆ ಜೀವ ಪ್ರಮಾಣಪತ್ರ ಒದಗಿಸುವ ಉದ್ದೇಶ)ಕ್ಕೆ ಕೆನಡಾ ಸರಕಾರ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.
ಗ್ರೇಟರ್ ಟೊರಂಟೊ ಪ್ರದೇಶದ ಬ್ರಾಂಪ್ಟನ್ ಮತ್ತು ಮಿಸ್ಸಿಸೌಗ, ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಮತ್ತು ಪ್ರಿನ್ಸ್ ಜಾರ್ಜ್ ನಗರ, ಸಸ್ಕಾಚೆವನ್ ಪ್ರಾಂತದ ಸಸ್ಕಟೂನ್‍ನಲ್ಲಿ ಕಾನ್ಸುಲರ್ ಶಿಬಿರ ನಡೆದಿದ್ದು, ಇದಕ್ಕೆ ಅಡ್ಡಿಪಡಿಸುವುದಾಗಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್(ಎಸ್‍ಎಫ್‍ಜೆ) ಬೆದರಿಕೆ ಒಡ್ಡಿತ್ತು. ಶನಿವಾರ ಮತ್ತು ರವಿವಾರ ನಡೆದ ಕಾರ್ಯಕ್ರಮದಲ್ಲಿ 1,200ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದಿದ್ದಾರೆ. ಬ್ರಾಂಪ್ಟನ್‍ನ ತ್ರಿವೇಣಿ ಮಂದಿರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ 75%ದಷ್ಟು ಮಂದಿ ಸಿಖ್ ಸಮುದಾಯದವರು ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ಸೋಮವಾರ ಬ್ರಿಟಿಷ್ ಕೊಲಂಬಿಯಾದ ಖಾಲ್ಸಾ ದಿವಾನ್ ಸೊಸೈಟಿ ಗುರುದ್ವಾರದಲ್ಲಿ ನಡೆದ ಕಾನ್ಸುಲರ್ ಶಿಬಿರಕ್ಕೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಅಡ್ಡಿಪಡಿಸಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಭಾಗ್ಚಿ ` ನಮ್ಮ ರಾಜತಾಂತ್ರಿಕ ಜವಾಬ್ದಾರಿಗಳನ್ನು ಪೂರೈಸಲು ಮತ್ತು ರಾಜತಾಂತ್ರಿಕರನ್ನು ಗೌರವಿಸಲು ರಾಜತಾಂತ್ರಿಕ ಸಂಬಂಧದ ವಿಯೆನ್ನಾ ಒಪ್ಪಂದವನ್ನು ರಾಷ್ಟ್ರಗಳು ಗೌರವಿಸುವ ಅಗತ್ಯವನ್ನು ಪುನರುಚ್ಚರಿಸುತ್ತೇವೆ' ಎಂದು ಹೇಳಿದ್ದರು.
`ಸಮುದಾಯ ಕಾರ್ಯಕ್ರಮಗಳ ನೆಪದಲ್ಲಿ ಬೇಹುಗಾರಿಕೆ ಜಾಲವನ್ನು ವಿಸ್ತರಿಸುವ ಉದ್ದೇಶವನ್ನು ಭಾರತದ ರಾಜತಾಂತ್ರಿಕರು ಹೊಂದಿರುವುದರಿಂದ ಕಾನ್ಸುಲರ್ ಕ್ಯಾಂಪ್‍ಗಳಿಗೆ ನಮ್ಮ ವಿರೋಧವಿದೆ' ಎಂದು ಎಸ್‍ಎಫ್‍ಜೆಯ ಪ್ರಧಾನ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನೂನ್ ಕಳೆದ ವಾರ ಹೇಳಿಕೆ ನೀಡಿದ್ದರು.