ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣ: ಇಬ್ಬರು ಶಂಕಿತರ ಬಂಧನಕ್ಕೆ ಮುಂದಾದ ಕೆನಡಾ
ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ನಿಜ್ಜರ್ ನನ್ನು ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲು ಕೆನಡಾ ಪೊಲೀಸರು ಮುಂದಾಗಿದ್ದಾರೆ ಎಂದು ಕೆನಡಾದ 'ಗ್ಲೋಬ್ ಅಂಡ್ ಮೈಲ್' ಪತ್ರಿಕೆ ವರದಿ ಮಾಡಿದೆ. ಈ ಇಬ್ಬರು ಶಂಕಿತರು ಪೊಲೀಸ್ ಕಣ್ಗಾವಲಿನಲ್ಲಿ ಇದ್ದು, ಕೆಲವೇ ವಾರಗಳಲ್ಲಿ ಅವರನ್ನು ಬಂಧಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
ನಿಜ್ಜರ್ ಹತ್ಯೆ ಬಳಿಕ ಈ ಶಂಕಿತ ಆರೋಪಿಗಳು ಕೆನಡಾ ತೊರೆದಿಲ್ಲ ಹಾಗೂ ಹಲವು ತಿಂಗಳಿನಿಂದ ಪೊಲೀಸ್ ನಿಗಾದಲ್ಲಿ ಇದ್ದಾರೆ ಎಂದು ಮೂವರು ಅನಾಮಧೇಯ ಅಧಿಕಾರಿಗಳನ್ನು ಗ್ಲೋಬ್ ಅಂಡ್ ಮೈಲ್ ಉಲ್ಲೇಖಿಸಿದೆ.
ಕೆನಡಾ ಪೊಲೀಸರು ಹತ್ಯೆ ಆರೋಪಿಗಳು ಶಾಮೀಲಾಗಿರುವುದನ್ನು ಮತ್ತು ಭಾರತ ಸರ್ಕಾರದ ಪಾತ್ರವನ್ನು ಆರೋಪಪಟ್ಟಿ ಸಲ್ಲಿಸುವ ವೇಳೆ ವಿವರಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಭಾರತ ಸರ್ಕಾರ 2020ರಲ್ಲಿ ನಿಜ್ಜರ್ ನನ್ನು ಉಗ್ರಗಾಮಿ ಎಂದು ಘೋಷಿಸಿದ್ದು, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಆಪಾದಿಸಿಸಿತ್ತು. ಆದರೆ ಭಾರತೀಯ ಅಧಿಕಾರಿಗಳ ಪ್ರಕಾರ, ಕೆನಡಾ ಈ ಬಗ್ಗೆ ಇದುವರೆಗೆ ಯಾವುದೇ ಪುರಾವೆಯನ್ನು ಒದಗಿಸಿಲ್ಲ ಅಥವಾ ತನ್ನ ಪ್ರತಿಪಾದನೆಯನ್ನು ಸಮರ್ಥಿಸುವ ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಕಳೆದ ಜೂನ್‍ನಲ್ಲಿ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರ ಹೊರಗೆ ನಿಜ್ಜರ್ ನನ್ನು ಹತ್ಯೆ ಮಾಡಲಾಗಿತ್ತು.