ಭಾರತೀಯ ವಿದ್ಯಾರ್ಥಿಗಳಿಗೆ `ಸ್ಟಡಿ ಪರ್ಮಿಟ್' ಪ್ರಮಾಣ ಕುಸಿತ: ಕೆನಡಾ
ಒಟ್ಟಾವ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಿವಾದದ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾದಲ್ಲಿ ಅಧ್ಯಯನ ನಡೆಸಲು ಅಗತ್ಯವಿರುವ ಸ್ಟಡಿ ಪರ್ಮಿಟ್‍ನ ಪ್ರಮಾಣದಲ್ಲಿ ಕುಸಿತ ದಾಖಲಾಗಿದೆ ಎಂದು ಕೆನಡಾದ ವಲಸೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತದ ಅಧಿಕಾರಿಯ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿಕೆ ನೀಡಿದ ಬಳಿಕ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿದೆ. `ಈ ವಿಷಯ ಇನ್ನೂ ಬಗೆಹರಿಯದೆ ಉಳಿದಿರುವುದರಿಂದ ಸ್ಟಡಿ ಪರ್ಮಿಟ್ ಪ್ರಕ್ರಿಯೆಯಲ್ಲಿನ ಇಳಿಕೆ ಮುಂದುವರಿಯುವ ನಿರೀಕ್ಷೆಯಿದೆ' ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆಯ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.
2022ರ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಭಾರತೀಯರಿಗೆ 1,08,940 ಸ್ಟಡಿ ಪರ್ಮಿಟ್ ನೀಡಲಾಗಿದ್ದರೆ 2023ರ ಇದೇ ಅವಧಿಯಲ್ಲಿ ಕೇವಲ 14,910 ಸ್ಟಡಿ ಪರ್ಮಿಟ್ ನೀಡಲಾಗಿದೆ. ಆದರೆ ಸ್ಟಡಿ ಪರ್ಮಿಟ್ ಪ್ರಮಾಣ ಕಡಿಮೆಯಾಗಲು ರಾಜತಾಂತ್ರಿಕ ವಿವಾದ ಮಾತ್ರ ಕಾರಣವಲ್ಲ, ಕೆನಡಾದಲ್ಲಿ ವಿದ್ಯಾರ್ಥಿಗಳ ಜೀವನ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದೂ ಕಾರಣವಾಗಿದೆ ಎಂದು ಅಧ್ಯಯನ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.