ಕೆನಡಾದ ಹಿಂದೂ ದೇವಾಲಯದ ಬಳಿ ಭಕ್ತರ ಮೇಲೆ ಹಲ್ಲೆ ಪ್ರಕರಣ: ಪನ್ನೂನ್ ಆಪ್ತನ ಬಂಧನ
ಹೊಸದಿಲ್ಲಿ: ಕೆನಡಾದ ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೀಲ್ ಪ್ರಾದೇಶಿಕ ಪೊಲೀಸರು ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಆಪ್ತ, ಕೆನಡಾದ ಬ್ರಾಂಪ್ಟನ್ ನಿವಾಸಿ ಇಂದರ್ಜೀತ್ ಸಿಂಗ್ ಗೋಸಾಲ್ ಎಂಬಾತನನ್ನು ಬಂಧಿಸಿದ್ದು, ಈತ ದೇವಾಲಯದ ಹೊರಗೆ ನಡೆದಿದ್ದ ಪ್ರತಿಭಟನೆಯ ಸಂಘಟಕ ಎಂದು ಕೂಡ ಹೇಳಲಾಗಿದೆ.
ನವೆಂಬರ್ 3ರಂದು ಬ್ರಾಂಪ್ಟನ್ ನ ದಿ ಗೋರ್ ರಸ್ತೆಯಲ್ಲಿರುವ ದೇವಾಲಯದ ಬಳಿ ಭಕ್ತರ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ಕೆನಡಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ 21ನೇ ವಿಭಾಗದ ಕ್ರಿಮಿನಲ್ ಇನ್ವೆಸ್ಟಿಗೇಶನ್ಸ್ ಬ್ಯೂರೋ ಮತ್ತು ಎಸ್ಐಟಿ ಅಧಿಕಾರಿಗಳು ಘರ್ಷಣೆಯ ಸಮಯದಲ್ಲಿ ಹಲ್ಲೆ ಮಾಡಲು ಧ್ವಜಗಳು ಮತ್ತು ಕೋಲುಗಳನ್ನು ಬಳಸುತ್ತಿರುವ ವೀಡಿಯೊ ತುಣುಕನ್ನು ವಿಶ್ಲೇಷಿಸಿದ್ದಾರೆ. ವಿಡಿಯೋ ಆಧರಿಸಿ ಇಂದರ್ಜೀತ್ ಸಿಂಗ್ ಗೋಸಾಲ್ ನನ್ನು ಬಂಧಿಸಲಾಗಿದ್ದು, ಆ ಬಳಿಕ ಷರತ್ತಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ತನಿಖಾಧಿಕಾರಿಗಳು, ನವೆಂಬರ್ 3 ಮತ್ತು 4ರ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ತನಿಖೆಯು ಸಮಯವನ್ನು ತೆಗೆದುಕೊಳ್ಳಲಿದ್ದು, ಆರೋಪಿಗಳನ್ನು ಗುರುತಿಸಿದಂತೆ ಬಂಧಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಗೋಸಾಲ್ ನನ್ನು ಬಂಧಿಸಿ ಷರತ್ತುಗಳ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಗೋಸಾಲ್ ʼಸಿಖ್ಸ್ ಫಾರ್ ಜಸ್ಟಿಸ್ʼ SFJ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮತ್ತು ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಪನ್ನುನ್ ಆಪ್ತನಾಗಿದ್ದ ಎನ್ನಲಾಗಿದೆ.