ಅಂತರಾಷ್ಟ್ರೀಯ ವಿದ್ಯಾರ್ಥಿ ಪರ್ಮಿಟ್ ಗೆ ಮಿತಿ ಹೇರಿದ ಕೆನಡಾ
ಒಟ್ಟಾವ: ಕೆನಡಾ ಅಂತರಾಷ್ಟ್ರೀಯ ವಿದ್ಯಾರ್ಥಿ ಪರ್ಮಿಟ್ ಗಳನ್ನು ಮೂರನೇ ಒಂದು ಭಾಗದಷ್ಟು ಮಿತಿಗೊಳಿಸಿದ್ದು ಇದು ಭಾರತೀಯರ ಮೇಲೆ ಪರಿಣಾಮ ಬೀರಲಿದೆ.
ಹೆಚ್ಚುತ್ತಿರುವ ವಸತಿ ಬಿಕ್ಕಟ್ಟು ಮತ್ತು ದೇಶಕ್ಕೆ ಹೊಸದಾಗಿ ಆಗಮಿಸುವವರ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪರ್ಮಿಟ್ ನ ಮೇಲೆ ತಕ್ಷಣದಿಂದಲೇ 2 ವರ್ಷದ ಮಿತಿ ಹಾಗೂ ಕೆಲವು ಸ್ನಾತಕೋತ್ತರ ಪದವಿ ಅಧ್ಯಯನದ ವೀಸಾವನ್ನು ಸ್ಥಗಿತಗೊಳಿಸುವುದಾಗಿ ಕೆನಡಾ ಸೋಮವಾರ ಘೋಷಿಸಿದೆ.
ಈ ಉಪಕ್ರಮದಿಂದಾಗಿ 2024ರಲ್ಲಿ ಸ್ಟಡಿ ಪರ್ಮಿಟ್ ನ ಪ್ರಮಾಣದಲ್ಲಿ 35%ದಷ್ಟು ಇಳಿಕೆಯಾಗಲಿದೆ. ಇದು ವಿದ್ಯಾರ್ಥಿಗಳ ಹಿತರಕ್ಷಣೆ, ನಮ್ಮ ವಸತಿ ಮಾರುಕಟ್ಟೆಯ ರಕ್ಷಣೆ ಮತ್ತು ನಮ್ಮ ಸೇವೆಯ ರಕ್ಷಣೆಯ ಉದ್ದೇಶವನ್ನು ಹೊಂದಿದೆ' ಎಂದು ವಲಸೆ ಸಚಿವ ಮಾರ್ಕ್ ಮಿಲರ್ ಹೇಳಿದ್ದಾರೆ. ಹೊಸ ಕ್ರಮವು ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2022ರಲ್ಲಿ ಕೆನಡಾದ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಜನಸಂಖ್ಯೆಯಲ್ಲಿ 40%ದಷ್ಟು ಭಾರತೀಯ ವಿದ್ಯಾರ್ಥಿಗಳಿದ್ದರು. ಶಿಕ್ಷಣ ಮತ್ತು ಶಾಶ್ವತ ನಿವಾಸವನ್ನು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಜನಪ್ರಿಯ ತಾಣವಾಗಿದೆ.