ಯುಎಇ ಅಧ್ಯಕ್ಷರೊಂದಿಗೆ ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಪ್ರಸ್ತಾವಿಸಿದ ಕೆನಡಾ ಪ್ರಧಾನಿ ಟ್ರುಡೊ

Update: 2023-10-10 12:54 GMT

 ಜಸ್ಟಿನ್ ಟ್ರುಡೊ | Photo: NDTV 

ಹೊಸದಿಲ್ಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಇಸ್ರೇಲ್ ಮತ್ತು ಹಮಾಸ್ ನಡುವೆ ಹಠಾತ್ ಹಿಂಸಾಚಾರ ಉಲ್ಬಣ ಕುರಿತು ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೆದ್ ಜೊತೆ ದೂರವಾಣಿ ಮಾತುಕತೆಗಳ ಸಂದರ್ಭ ಕೆನೆಡಿಯನ್ ಪ್ರಜೆಯ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ಪರಿಣಾಮಗಳನ್ನು ಶಮನಿಸಲು ವಿಶ್ವದ ಇತರ ದೇಶಗಳು ಪ್ರಯತ್ನಿಸುತ್ತಿದ್ದು,ಅವುಗಳ ನಡುವೆ ಭರಾಟೆಯ ದೂರವಾಣಿ ಮಾತುಕತೆಗಳು ನಡೆಯುತ್ತಿವೆ.

ಈ ಸಂಘರ್ಷದಲ್ಲಿ ಈಗಾಗಲೇ ಸುಮಾರು 1,000 ಜನರು ಮೃತಪಟ್ಟಿದ್ದಾರೆ. ಅಬ್ರಹಾಂ ಒಪ್ಪಂದದ ಮೂಲಕ ಇಸ್ರೇಲ್ ಜೊತೆ ತನ್ನ ಸಂಬಂಧವನ್ನು ಸಾಮಾನ್ಯಗೊಳಿಸಿಕೊಂಡಿರುವ ಯುಎಇ ಕೂಡ ಈ ಮಾತುಕತೆಗಳ ಪ್ರವಾಹದ ಭಾಗವಾಗಿದೆ. ಮುಹಮ್ಮದ್ ಬಿನ್ ಝಾಯೆದ್ ಅವರು ರವಿವಾರ ಇತ್ತೀಚಿನ ಇಸ್ರೇಲ್-ಫೆಲೆಸ್ತೀನಿಯನ್ ಹಿಂಸಾಚಾರದ ಕುರಿತು ಈಜಿಪ್ಟ್, ಸಿರಿಯಾ ಮತ್ತು ಇಸ್ರೇಲ್‌ಗಳ ಅಧ್ಯಕ್ಷರು ಮತ್ತು ಟ್ರುಡೊ ಜೊತೆಗೆ ದೂರವಾಣಿ ಮಾತುಕತೆಗಳನ್ನು ನಡೆಸಿದ್ದಾರೆ ಎಂದು ಯುಎಇಯ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಪ್ರದೇಶವು ಹೊಸ ಬಿಕ್ಕಟ್ಟಿಗೆ ಸಿಲುಕದಂತೆ ಉದ್ವಿಗ್ನತೆಯನ್ನು ಶಮನಿಸುವ ಮತ್ತು ಗರಿಷ್ಠ ಸಂಯಮವನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಯುಎಇ ಹೇಳಿಕೆಯಲ್ಲಿ ತಿಳಿಸಿದೆ. ಉಭಯ ನಾಯಕರು ಇಸ್ರೇಲ್ ಮೇಲೆ ಹಮಾಸ್ ದಾಳಿಯ ಕುರಿತು ಮಾತನಾಡಿದರು ಎಂದು ಕೆನಡಾ ಹೇಳಿಕೆಯಲ್ಲಿ ತಿಳಿಸಿದೆ. ಟ್ರುಡೊ ತನ್ನ ಮಾತುಕತೆ ಸಂದರ್ಭದಲ್ಲಿ ಕೆನಡಾ ಮತ್ತು ಭಾರತದ ನಡುವಿನ ಸ್ಥಿತಿಯ ಕುರಿತು ಇತ್ತೀಚಿನ ಮಾಹಿತಿಯನ್ನು ಒದಗಿಸಿದರು ಎಂದು ಯುಎಇ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸದ ಇನ್ನೊಂದು ವಿವರವನ್ನೂ ಅದು ನೀಡಿದೆ.

ಭಾರತದ ಕುರಿತಂತೆ ಉಭಯ ನಾಯಕರು ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯುವ ಮತ್ತು ಗೌರವಿಸುವ ಮಹತ್ವದ ಕುರಿತು ಮಾತನಾಡಿದರು ಎಂದು ಟ್ರುಡೊ ಟ್ವೀಟಿಸಿದ್ದಾರೆ. ಟ್ರುಡೊ ಜೋರ್ಡಾನ್ ದೊರೆ ಅಬ್ದುಲ್ಲಾ ಅವರೊಂದಿಗೂ ದೂರವಾಣಿ ಮಾತುಕತೆಗಳನ್ನು ನಡೆಸಿದ್ದಾರಾದರೂ ಭಾರತದೊಂದಿಗಿನ ವಿವಾದವನ್ನು ಪ್ರಸ್ತಾಪಿಸಿರುವ ಯಾವುದೇ ಸೂಚನೆಯಿಲ್ಲ. ಟ್ರುಡೊ ಕಳೆದ ತಿಂಗಳು ಸಂಸತ್ತಿನಲ್ಲಿ,ಖಾಲಿಸ್ತಾನಿ ಭಯೋತ್ಪಾದಕ ಹಾಗೂ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರಕಾರದ ಪಾತ್ರವಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು.

ಈ ಆರೋಪವನ್ನು ಭಾರತವು ತಿರಸ್ಕರಿಸಿದ್ದು,ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಪಾಶ್ಚಾತ್ಯ ಗುಂಪಿನ ಹೊರಗೆ,ಯುಎಇ ಅಧ್ಯಕ್ಷರ ಜೊತೆ ಟ್ರುಡೊ ಭಾರತದೊಂದಿಗಿನ ಬಿಕ್ಕಟ್ಟನ್ನು ಪ್ರಸ್ತಾಪಿಸಿದ್ದು ಖಂಡಿತವಾಗಿಯೂ ಕೇಂದ್ರ ಸರಕಾರ ಹುಬ್ಬೇರಿಸುವಂತೆ ಮಾಡಲಿದೆ. ಯುಎಇ ಪಶ್ಚಿಮ ಏಷ್ಯಾದಲ್ಲಿ ಭಾರತದ ನಿಕಟ ವ್ಯೆಹಾತ್ಮಕ ಪಾಲುದಾರರಲ್ಲಿ ಒಂದಾಗಿದೆ. ಕಳೆದ ವರ್ಷ ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News