ಭಾರತದಿಂದ ಬೇಹುಗಾರಿಕೆ ಚಟುವಟಿಕೆ | ಕೆನಡಾ ಗುಪ್ತಚರ ಏಜೆನ್ಸಿ ಆರೋಪ

Update: 2024-05-10 17:26 GMT

PC : indiatoday

ಟೊರಂಟೊ: ಕೆನಡಾದಲ್ಲಿ ಭಾರತವು ಪ್ರತಿಕೂಲ ವಿದೇಶಿ ಹಸ್ತಕ್ಷೇಪ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಕೆನಡಾದ ಗುಪ್ತಚರ ಸಂಸ್ಥೆ ಆರೋಪಿಸಿದೆ.

ಕೆನಡಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ವಿದೇಶಿ ಹಸ್ತಕ್ಷೇಪ ಮತ್ತು ಬೇಹುಗಾರಿಕೆಯ ಪ್ರಮುಖ ಅಪರಾಧಿಗಳ ಸಾಲಿನಲ್ಲಿ ಚೀನಾ, ರಶ್ಯ, ಇರಾನ್ ಮತ್ತು ಭಾರತವಿದೆ. 2023ರಲ್ಲಿ ಈ ದೇಶಗಳು ಮತ್ತು ಅವರ ಗುಪ್ತಚರ ಸೇವೆಗಳು ತಮ್ಮ ಉದ್ದೇಶಗಳು ಮತ್ತು ಹಿತಾಸಕ್ತಿಗಳನ್ನು ಮುನ್ನಡೆಸಲು ವಿವಿಧ ರೀತಿಯ ಹಸ್ತಕ್ಷೇಪ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಈ ವಾರ ಬಿಡುಗಡೆಗೊಂಡಿರುವ ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸಸ್(ಸಿಎಸ್ಐಎಸ್) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಸಂಸತ್ನಲ್ಲಿ ಆರೋಪ ಮಾಡಿದ ಬಳಿಕ ಸಿಎಸ್ಐಎಸ್ನ ನಿರ್ದೇಶಕ ಡೇವಿಡ್ ವಿಗ್ನಾಲ್ಟ್ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರ ಜೋಡಿ ಥಾಮಸ್ ಭಾರತಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಕೆನಡಾದಲ್ಲಿ ನಡೆದ ಕೆನಡಾ ಪ್ರಜೆಯ ಹತ್ಯೆ ಪ್ರಕರಣದಲ್ಲಿ ಭಾರತದ ಸಂಭಾವ್ಯ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಭಾರತ ಸರಕಾರದಿಂದ ಹೊಣೆಗಾರಿಕೆಯ ಅಗತ್ಯವಿದೆ ಎಂದು ವರದಿ ಹೇಳಿದೆ.

ಕೆನಡಾ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಬಳಿಕ `ಕೆನಡಾ ವಿರುದ್ಧ ಭಾರತ ಸಂಯೋಜಿತ ಸರಕಾರೇತರ ಸೈಬರ್ ಸಂಸ್ಥೆಗಳಿಂದ ಸೈಬರ್ ದಾಳಿ ಪ್ರಕರಣ ವರದಿಯಾಗಿದೆ. ಆದರೆ ಈ ಸೈಬರ್ ಚಟುವಟಿಕೆಗಳಿಗೆ ಭಾರತ ಸರಕಾರ ಹೊಣೆಯಾಗಿರುವುದಕ್ಕೆ ಯಾವುದೇ ಸೂಚನೆ ದೊರಕಿಲ್ಲ ಎಂದು ವರದಿ ಹೇಳಿದೆ.

2019ರ ಜೂನ್ನಲ್ಲಿ ಬಿಡುಗಡೆಯಾಗಿರುವ ಸಿಎಸ್ಐಎಸ್ಯ 2018ರ ಸಾರ್ವಜನಿಕ ವರದಿಯನ್ನು ಇಲ್ಲಿ ಗಮನಿಸಬಹುದು. ` ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ಸೇರಿದಂತೆ ಖಾಲಿಸ್ತಾನ್ಗೆ ಬೆಂಬಲಿಸುವ ಬೆದರಿಕೆ ಚಟುವಟಿಕೆ ದೇಶದಲ್ಲಿ ಹೆಚ್ಚಿದೆ. ಭಾರತದೊಳಗೆ ಸ್ವತಂತ್ರ ದೇಶ ಸ್ಥಾಪನೆಗೆ ಹಿಂಸಾತ್ಮಕ ಮಾರ್ಗವನ್ನು ಬೆಂಬಲಿಸುವ ಅಲ್ಪಪ್ರಮಾಣದಲ್ಲಿರುವ ಕೆನಡಾ ಮೂಲದ ತೀವ್ರವಾದಿಗಳಿಂದ ಭಾರತವನ್ನು ಗುರಿಯಾಗಿಸಿ ಬೆದರಿಕೆ ಹಾಗೂ ಇತರ ಕೃತ್ಯಗಳು ಕೆನಡಾದಲ್ಲಿ ವ್ಯಾಪಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News