ಮಾಸ್ಕೊ ಮೇಲೆ ದಾಳಿ ನಡೆಸುವಷ್ಟು ಸಾಮರ್ಥ್ಯ ಐಎಸ್ ಗೆ ಇದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ: ರಶ್ಯ
ಮಾಸ್ಕೊ: 143 ಮಂದಿ ಸಾವಿಗೆ ಕಾರಣವಾದ ಮಾಸ್ಕೊ ಸಂಗೀತ ಸಭಾಂಗಣದ ಮೇಲಿನ ದಾಳಿ ನಡೆಸುವಷ್ಟು ಸಾಮರ್ಥ್ಯ ಇಸ್ಲಾಮಿಕ್ ಸ್ಟೇಟ್ಸ್ ಗೆ ಇದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ರಶ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲಿ ಸಂಭವಿಸಿರುವ ಕ್ರೊಕಸ್ ಸಿಟಿ ಹಾಲ್ ಮೇಲಿನ ಭೀಕರ ದಾಳಿಯ ಹಿಂದೆ ಉಕ್ರೇನ್ ಇದೆ ಎಂಬ ರಶ್ಯದ ಅನುಮಾನವನ್ನು ಝಖರೋವಾ ಪುನರುಚ್ಚರಿಸಿದ್ದಾರೆ. ಆದರೆ, ಅವರು ತಮ್ಮ ಆರೋಪಕ್ಕೆ ಇನ್ನೂ ಸಾಕ್ಷ್ಯಾಧಾರ ಒದಗಿಸಬೇಕಿದೆ.
ಕಳೆದ ಶುಕ್ರವಾರ ನಡೆದ ಗುಂಪು ದಾಳಿಯಲ್ಲಿ ಮೃತಪಟ್ಟ 143 ಮಂದಿಯ ಹೆಸರುಗಳ ಪಟ್ಟಿಯನ್ನು ರಶ್ಯಾದ ತುರ್ತುಗಳ ಸಚಿವಾಲಯವು ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ, ಅಧಿಕಾರಿಗಳು 139 ಮಂದಿ ಮೃತರ ಹೆಸರನ್ನು ಮಾತ್ರ ಹೋಲಿಕೆ ಮಾಡಿದ್ದರು.
ಈ ಮಾರಣ ಹೋಮದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಸ್ ಹೊತ್ತುಕೊಂಡಿದ್ದು, ಅಫ್ಘನ್ ಶಾಖೆಯಾದ ಇಸ್ಲಾಮಿಕ್ ಸ್ಟೇಟ್ಸ್ ಖೊರಾಸನ್ ಜಾಲವು ಈ ಕೃತ್ಯವನ್ನು ಎಸಗಿದೆ ಎಂದು ನಮ್ಮ ಗುಪ್ತಚರ ಮಾಹಿತಿಗಳು ಹೇಳುತ್ತಿವೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ನಮಗೂ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್ ಪದೇ ಪದೇ ನಿರಾಕರಿಸುತ್ತಿದೆ.
ಹೀಗಿದ್ದೂ, ಐಸಿಸ್ ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ಸ್ ಮೇಲೆ ದಾಳಿಯ ಹೊಣೆ ಹೊರಿಸಲು ಪಾಶ್ಚಿಮಾತ್ಯ ಮಾಧ್ಯಮಗಳು ಉತ್ಸುಕವಾಗಿವೆ. ಅ ಮೂಲಕ ಕೀವ್ ಗೆ ನೆರವು ನೀಡುತ್ತಿರುವ ಪಾಶ್ಚಿಮಾತ್ಯ ಸರಕಾರಗಳು ಹಾಗೂ ಉಕ್ರೇನ್ ದೂಷಣೆಗೊಳಗಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಝಖರೋವಾ ಆರೋಪಿಸಿದ್ದಾರೆ.