ಮಧ್ಯ ಯುರೋಪ್ | ಪ್ರವಾಹದಿಂದ ವ್ಯಾಪಕ ನಷ್ಟ ; 24 ಮಂದಿ ಮೃತ್ಯು

Update: 2024-09-20 15:51 GMT

indiatoday |ಸಾಂದರ್ಭಿಕ ಚಿತ್ರ

ವಾರ್ಸಾ : ಮಧ್ಯ ಯುರೋಪ್‍ನಾದ್ಯಂತ ಭಾರೀ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು 24ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಪೋಲ್ಯಾಂಡ್, ರೊಮಾನಿಯಾ, ಝೆಕ್ ಗಣರಾಜ್ಯ ಮತ್ತು ಆಸ್ಟ್ರಿಯಾಗಳಲ್ಲಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ ವಾರ ಆರಂಭಗೊಂಡ ಮಳೆ ಹಲವು ದಿನ ನಿರಂತರ ಸುರಿದ ಕಾರಣ ಹಲವು ಸೇತುವೆಗಳು ನಾಶಗೊಂಡಿದ್ದು ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡಿವೆ. ಪೋಲ್ಯಾಂಡ್‍ನ ಮೂರನೇ ಅತೀ ದೊಡ್ಡ ನಗರವಾದ ರೊಕ್ಲಾದಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದ್ದರೂ ಹೆಚ್ಚಿನ ನಾಶ-ನಷ್ಟ ಸಂಭವಿಸಿಲ್ಲ. ಆದರೆ ಈ ವಾರಾಂತ್ಯವೂ ಮಳೆಯಾಗುವ ಸೂಚನೆಯಿರುವುದರಿಂದ ಎಚ್ಚರ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ.

ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸರು ಹಾಗೂ ಸ್ವಯಂಸೇವಕರಿಗೆ ನೆರವಾಗಲು 16,000 ಯೋಧರನ್ನು ನಿಯೋಜಿಸಲಾಗಿದೆ ಎಂದು ಸೇನೆ ಹೇಳಿದೆ. ಈ ಮಧ್ಯೆ, ಪೊಲೀಸರ ಸಮವಸ್ತ್ರ ಧರಿಸಿ ಪ್ರವಾಹದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಿ ಭೀತಿ ಮೂಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಂಗರಿಯಲ್ಲಿ ಡ್ಯಾನ್ಯೂಬ್ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ರಾಜಧಾನಿ ಬುಡಾಪೆಸ್ಟ್‍ನಲ್ಲಿ ಪ್ರವಾಹದ ಅಪಾಯ ಹೆಚ್ಚಿದೆ ಎಂದು ಪ್ರಧಾನಿ ವಿಕ್ಟರ್ ಆರ್ಬನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News