ಐಸಿಸಿ ಬಂಧನ ವಾರಂಟ್ ಕೋರಿಕೆ ವಿರುದ್ಧ ಇಸ್ರೇಲ್ ಮೇಲ್ಮನವಿ

Update: 2024-09-20 16:04 GMT

ಬೆಂಜಮಿನ್ ನೆತನ್ಯಾಹು | PC : PTI 

ಜೆರುಸಲೇಂ : ಗಾಝಾ ಯುದ್ಧದಲ್ಲಿನ ನಿಲುವು ಹಾಗೂ ವರ್ತನೆಗೆ ಸಂಬಂಧಿಸಿ ಇಸ್ರೇಲ್‍ನ ಪ್ರಮುಖ ಮುಖಂಡರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಬೇಕೆಂದು ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಸಿ)ದಲ್ಲಿ ಸಲ್ಲಿಕೆಯಾಗಿರುವ ಕೋರಿಕೆಯನ್ನು ಪ್ರಶ್ನಿಸಿ ಇಸ್ರೇಲ್ ಶುಕ್ರವಾರ ಅರ್ಜಿ ಸಲ್ಲಿಸಿದೆ ಎಂದು ಇಸ್ರೇಲ್ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲು ಕೋರುವ ಅರ್ಜಿಯನ್ನು ಮೇ ತಿಂಗಳಿನಲ್ಲಿ ಸಲ್ಲಿಸಲಾಗಿತ್ತು. ಇದೀಗ ಅರ್ಜಿಯನ್ನು ಪ್ರಶ್ನಿಸಿ ಇಸ್ರೇಲ್ ಮೇಲ್ಮನವಿ ಸಲ್ಲಿಸಿರುವುದರಿಂದ ಅರ್ಜಿಯ ಕುರಿತ ತೀರ್ಪು ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ.

ಹಮಾಸ್ ಮುಖಂಡ ಯಾಹ್ಯಾ ಸಿನ್ವರ್ ಹಾಗೂ ಇತರ ಹಮಾಸ್ ಮುಖಂಡರ ವಿರುದ್ಧವೂ ಬಂಧನ ವಾರಂಟ್ ಜಾರಿಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕೆಂದು ಐಸಿಸಿ ಪ್ರಾಸಿಕ್ಯೂಟರ್ ಕರೀಂ ಖಾನ್ ಕಳೆದ ತಿಂಗಳು ಆಗ್ರಹಿಸಿರುವಂತೆಯೇ ಇಸ್ರೇಲ್ ಮೇಲ್ಮನವಿ ಸಲ್ಲಿಸಿದೆ.

`ಈ ಪ್ರಕರಣದಲ್ಲಿ ಐಸಿಸಿಯ ಅಧಿಕಾರದ ಕೊರತೆ ಸ್ಪಷ್ಟವಾಗಿದೆ. ಜತೆಗೆ, ಪ್ರಾಸಿಕ್ಯೂಟರ್ ಮಾಡಿರುವ ಪ್ರತಿಪಾದನೆಯ ಬಗ್ಗೆ ಸ್ವತಃ ತನಿಖೆ ನಡೆಸುವ ಅಧಿಕಾರವನ್ನು ಚಲಾಯಿಸಲು ಇಸ್ರೇಲ್‍ಗೆ ಅವಕಾಶ ನೀಡದೆ ಅರ್ಜಿಯನ್ನು ವಿಚಾರಣೆ ಎತ್ತಿಕೊಂಡಿರುವುದು ಸರಿಯಲ್ಲ' ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News