AI ನಿಯಂತ್ರಿಸಲು 7 ಸಲಹೆ ನೀಡಿದ ವಿಶ್ವಸಂಸ್ಥೆ ಸಲಹಾ ಸಮಿತಿ

Update: 2024-09-20 14:45 GMT

ಸಾಂದರ್ಭಿಕ ಚಿತ್ರ | PC : PTI

ಸ್ಟಾಕ್‍ಹೋಮ್ : ಕೃತಕ ಬುದ್ಧಿಮತ್ತೆ(AI) ಸಂಬಂಧಿತ ಅಪಾಯಗಳು ಮತ್ತು ಆಡಳಿತದಲ್ಲಿನ ಅಂತರವನ್ನು ಪರಿಹರಿಸಲು ವಿಶ್ವಸಂಸ್ಥೆಯ ಕೃತಕ ಬುದ್ಧಿಮತ್ತೆ ಸಲಹಾ ಸಮಿತಿಯು ಗುರುವಾರ ಏಳು ಸಲಹೆಗಳನ್ನು ಶಿಫಾರಸು ಮಾಡಿದೆ.

ಕೃತಕ ಬುದ್ಧಿಮತ್ತೆಯ ಅಂತರಾಷ್ಟ್ರೀಯ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನ ನೀಡಲು ಕಳೆದ ವರ್ಷ ವಿಶ್ವಸಂಸ್ಥೆಯು 39 ಸದಸ್ಯರ ಸಲಹಾ ಮಂಡಳಿಯನ್ನು ರಚಿಸಿತ್ತು. ಇದೀಗ ಸಮಿತಿ ನೀಡಿರುವ ಶಿಫಾರಸುಗಳ ಬಗ್ಗೆ ಈ ತಿಂಗಳಾಂತ್ಯದಲ್ಲಿ ನಡೆಯುವ ವಿಶ್ವಸಂಸ್ಥೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು.

AI ಕುರಿತು ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ಜ್ಞಾನವನ್ನು ಒದಗಿಸಲು ಮತ್ತು AI ಪ್ರಯೋಗಾಲಯಗಳು ಹಾಗೂ ವಿಶ್ವದ ಇತರ ಭಾಗಗಳ ನಡುವಿನ ಮಾಹಿತಿ ಸಮಾನತೆಯ ಕೊರತೆಯನ್ನು ಪರಿಹರಿಸಲು ಸಮಿತಿಯನ್ನು ರಚಿಸಲು ಸಲಹಾ ಸಮಿತಿ ಕರೆ ನೀಡಿದೆ. 2022ರಲ್ಲಿ ಮೈಕ್ರೋಸಾಫ್ಟ್ ಬೆಂಬಲಿತ ಓಪನ್‍ಎಐ ಚಾಟ್‍ಜಿಪಿಟಿ ಬಿಡುಗಡೆಯಾದಂದಿನಿಂದ AI ಬಳಕೆ ವೇಗವಾಗಿ ಹರಡಿದ್ದು ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಹಕ್ಕು ಸ್ವಾಮ್ಯದ ಉಲ್ಲಂಘನೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಕೇವಲ ಬೆರಳೆಣಿಕೆಯಷ್ಟು ರಾಷ್ಟ್ರಗಳು ಮಾತ್ರ AI ಸಾಧನಗಳನ್ನು ನಿಯಂತ್ರಿಸುವ ಕಾನೂನುಗಳನ್ನು ರಚಿಸಿವೆ.

ಅಮೆರಿಕಕ್ಕೆ ಹೋಲಿಸಿದರೆ ಯುರೋಪಿಯನ್ ಯೂನಿಯನ್ ಸಮಗ್ರ AI ಕಾಯ್ದೆಯನ್ನು ಅನುಮೋದಿಸುವ ಮೂಲಕ ಇತರರಿಗಿಂತ ತುಂಬಾ ಮುಂದಿದೆ. ಚೀನಾವು ಸಾಮಾಜಿಕ ಸ್ಥಿರತೆ ಮತ್ತು AI ಮೇಲೆ ಸರಕಾರದ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಮಿಲಿಟರಿಯಲ್ಲಿ ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆಯ ಮೇಲೆ ನಿಯಂತ್ರಣ ಸಾಧಿಸುವ ನೀಲನಕ್ಷೆಯನ್ನು ಅನುಮೋದಿಸಿದ ಸುಮಾರು 60 ದೇಶಗಳಲ್ಲಿ ಅಮೆರಿಕವೂ ಸೇರಿದೆ.

ಆದರೆ ಈ ದಾಖಲೆಯನ್ನು ಚೀನಾ ಬೆಂಬಲಿಸಿಲ್ಲ. ಕೆಲವು ಬಹುರಾಷ್ಟ್ರೀಯ ಕಂಪೆನಿಗಳು AI ಅಭಿವೃದ್ಧಿಗೊಳಿಸಿ ತಂತ್ರಜ್ಞಾನವನ್ನು ( ಬಳಕೆಯ ಬಗ್ಗೆ ಅರಿವಿಲ್ಲದ) ಜನರ ಮೇಲೆ ಹೇರುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಜತೆಗೆ, AI ಆಡಳಿತದ ಕುರಿತು ಹೊಸ ನೀತಿ ಸಂವಾದವನ್ನು ಶಿಫಾರಸು ಮಾಡಿದ್ದು AI ಮಾನದಂಡಗಳ ವಿನಿಮಯವನ್ನು ಮತ್ತು ನಿರ್ವಹಣೆಯ ಸಾಮರ್ಥ್ಯ ಗಳನ್ನು ಹೆಚ್ಚಿಸಲು ಜಾಗತಿಕ AI ಸಾಮರ್ಥ್ಯ ಅಭಿವೃದ್ಧಿ ಜಾಲವನ್ನು ರಚಿಸುವುದು, ಜಾಗತಿಕ AI ನಿಧಿ ಸ್ಥಾಪನೆಯ ಬಗ್ಗೆ ಶಿಫಾರಸು ಮಾಡಿದೆ. ಅಂತಿಮವಾಗಿ, ಈ ಶಿಫಾರಸುಗಳ ಅನುಷ್ಠಾನವನ್ನು ಬೆಂಬಲಿಸಲು ಮತ್ತು ಸಂಘಟಿಸಲು ಸಣ್ಣ AI ಕಚೇರಿಯನ್ನು ಸ್ಥಾಪಿಸಲು ವಿಶ್ವಸಂಸ್ಥೆ ಶಿಫಾರಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News