ಭದ್ರತಾ ವಿಷಯಗಳಲ್ಲಿ ನಿಕಟ ಸಹಕಾರ ; ಇರಾನ್‍ಗೆ ಪಾಕ್ ಆಗ್ರಹ
ಇಸ್ಲಮಾಬಾದ್: ಭದ್ರತಾ ವಿಷಯಗಳಲ್ಲಿ ಇರಾನ್-ಪಾಕಿಸ್ತಾನ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಪಾಕಿಸ್ತಾನ ಶುಕ್ರವಾರ ಆಗ್ರಹಿಸಿದೆ.
ಇರಾನ್ ವಿದೇಶಾಂಗ ಸಚಿವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ `ಎಲ್ಲಾ ವಿಷಯಗಳ ಬಗ್ಗೆಯೂ ಇರಾನ್ ಜತೆ ಕೆಲಸ ಮಾಡಲು ನಮ್ಮ ದೇಶ ಸಿದ್ಧವಿದೆ' ಎಂದು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಪಾಕಿಸ್ತಾನವು ಇರಾನ್ ಜತೆಗಿನ ಬಿಕ್ಕಟ್ಟನ್ನು ಹೆಚ್ಚಿಸಲು ಬಯಸುವುದಿಲ್ಲ. ಉದ್ವಿಗ್ನತೆಯನ್ನು ಪ್ರಚೋದಿಸುವ ಕಾರ್ಯದಲ್ಲಿ ನಮಗೆ ಆಸಕ್ತಿಯಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಉಭಯ ಮುಖಂಡರ ನಡುವಿನ ಮಾತುಕತೆ ಸಕಾರಾತ್ಮಕ ರೀತಿಯಲ್ಲಿ ನಡೆದಿದೆ ಎಂದು ವರದಿ ಹೇಳಿದೆ.
ಇದೇ ವೇಳೆ, ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್‍ರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಪಾಕ್ ವಿದೇಶಾಂಗ ಸಚಿವ ಜಿಲಾನಿ, ಪಾಕಿಸ್ತಾನದ ನಿಲುವನ್ನು ಸ್ಪಷ್ಟಪಡಿಸಿದರು. ಇತ್ತೀಚಿನ ಬೆಳವಣಿಗೆ, ಪಾಕಿಸ್ತಾನದ ದೃಷ್ಟಿಕೋನದ ಬಗ್ಗೆ ವಿವರಿಸಿದ ಜಿಲಾನಿ `ಪಾಕಿಸ್ತಾನ ನಡೆಸಿದ ಕಾರ್ಯಾಚರಣೆ ಇರಾನ್ ಒಳಗಿನ ಉಗ್ರರ ನೆಲೆಯನ್ನು ಗುರಿಯಾಗಿಸಿತ್ತು' ಎಂದು ಸ್ಪಷ್ಟಪಡಿಸಿರುವುದಾಗಿ `ಜಿಯೊ ನ್ಯೂಸ್' ವರದಿ ಮಾಡಿದೆ.