ಚೀನಾದ ಮಿಲಿಟರಿ ಮತ್ತು ಆರ್ಥಿಕ ನೀತಿಗಳ ವಿರುದ್ಧ ಸಾಮೂಹಿಕ ಕ್ರಮ | ಜಿ7 ಶೃಂಗಸಭೆಯಲ್ಲಿ ಸಮಾಲೋಚನೆ

Update: 2024-06-14 16:31 GMT

ಜಿ7 ಶೃಂಗಸಭೆ | PC : PTI

ರೋಮ್: ಇಟಲಿಯ ಪ್ಯುಗಿಲಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಎರಡನೇ ದಿನದ ಕಾರ್ಯಸೂಚಿ(ಅಜೆಂಡಾ)ಯಲ್ಲಿ ಚೀನಾದೊಂದಿಗೆ ವ್ಯಾಪಾರ ಯುದ್ಧವನ್ನು ಪ್ರಚೋದಿಸದೆ ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ರಶ್ಯದ ಯುದ್ಧ ಯಂತ್ರಕ್ಕೆ ಅಗತ್ಯವಿರುವ ವಸ್ತುಗಳನ್ನು ಪೂರೈಸುತ್ತಿರುವ ಚೀನಾದ ವಿರುದ್ಧ ಸಾಮೂಹಿಕ ಕ್ರಮ ಕೈಗೊಳ್ಳಲು ಜಿ7 ದೇಶಗಳು ಸಮ್ಮತಿಸಿವೆ. ಉನ್ನತ ಮಟ್ಟದಲ್ಲಿ ಚೀನಾಕ್ಕೆ ಸಂದೇಶವನ್ನು ಅತ್ಯಂತ ಪ್ರಾಮಾಣಿಕವಾಗಿ ತಿಳಿಸುವ ಅಗತ್ಯವನ್ನು ಎಲ್ಲಾ ಸದಸ್ಯರೂ ಮನಗಂಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಚೀನಾದ ನ್ಯಾಯಸಮ್ಮತವಲ್ಲದ ಮಾರುಕಟ್ಟೆ ಕ್ರಮಗಳನ್ನು ಹಾಗೂ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಅದು ರಶ್ಯಕ್ಕೆ ನೀಡುತ್ತಿರುವ ಮಿಲಿಟರಿ ನೆರವನ್ನು ತಡೆಯಲು ಜಿ7 ಒಕ್ಕೂಟದ 7 ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಿವೆ. 7 ಶ್ರೀಮಂತ ದೇಶಗಳಾದ ಅಮೆರಿಕ, ಇಟಲಿ, ಬ್ರಿಟನ್, ಕೆನಡಾ, ಜಪಾನ್, ಫ್ರಾನ್ಸ್ ಮತ್ತು ಜರ್ಮನಿಯನ್ನು ಒಳಗೊಂಡಿರುವ ಜಿ7, ನ್ಯಾಯೋಚಿತ ವ್ಯಾಪಾರದ ಸಾಧ್ಯತೆಯನ್ನು, ವಿಶೇಷವಾಗಿ ಹಸಿರು ತಂತ್ರಜ್ಞಾನದ ಕ್ಷೇತ್ರದಲ್ಲಿ, ಚರ್ಚಿಸಲಿವೆ. ಚೀನಾವು ರಶ್ಯಕ್ಕೆ ಮಿಲಿಟರಿ ನೆರವನ್ನು ನೀಡುವ ಮೂಲಕ ಉಕ್ರೇನ್ ಯುದ್ಧವನ್ನು ದೀರ್ಘಾವಧಿಗೆ ಮುಂದುವರಿಸುತ್ತಿದೆ ಎಂದು ಅಮೆರಿಕ ಪ್ರತಿಪಾದಿಸಿದ್ದು ಚೀನಾದ ಮಿಲಿಟರಿ ಕೃತ್ಯಗಳಿಗೆ ಪ್ರತಿಯಾಗಿ ಜಿ7 ಒಕ್ಕೂಟದಿಂದ ಏಕರೀತಿಯ ಪ್ರತಿಕ್ರಮದ ಅಗತ್ಯವಿದೆ ಎಂದು ಆಗ್ರಹಿಸಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳ ನಡುವಿಬ ವ್ಯಾಪಾರ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ. ಇದರ ನಡುವೆ ಯುರೋಪಿಯನ್ ಯೂನಿಯನ್ ಚೀನಾದ ವಿದ್ಯುತ್ ವಾಹನಗಳಿಗೆ ಹೊಸ ಸುಂಕವನ್ನು ವಿಧಿಸುವ ಯೋಜನೆಯನ್ನು ಘೋಷಿಸಿದೆ. ಜಿ7ರ 8ನೇ ಪಾಲುದಾರ ಎಂದೇ ಕರೆಸಿಕೊಳ್ಳುವ ಯುರೋಪಿಯನ್ ಯೂನಿಯನ್, ಅಮೆರಿಕ ಮತ್ತು ಜಪಾನ್ ದೇಶಗಳು ಚೀನಾದ `ಅತಿ ಉತ್ಪಾದಕತೆ' ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಚೀನಾದ ಉದಾರ ಸಬ್ಸಿಡಿ ನೀತಿಗಳು ( ವಿಶೇಷವಾಗಿ ಸೋಲಾರ್ ಪ್ಯಾನೆಲ್ ಮತ್ತು ವಿದ್ಯುತ್ ವಾಹನದಂತಹ ಹಸಿರು ತಂತ್ರಜ್ಞಾನ ಕ್ಷೇತ್ರಕ್ಕೆ) ನ್ಯಾಯೋಚಿತವಲ್ಲದ ರೀತಿಯಲ್ಲಿ ಅಗ್ಗದ ವಸ್ತುಗಳು ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಕಾರಣವಾಗಿದೆ. ಇದರಿಂದ ಪಾಶ್ಚಿಮಾತ್ಯ ದೇಶಗಳಿಗೆ ಸ್ಪರ್ಧೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಈ ದೇಶಗಳು ಹೇಳಿವೆ. ಹಾನಿಕಾರಕ ಜಾಗತಿಕ ಪರಿಣಾಮಗಳಿಗೆ ಕಾರಣವಾಗುವ ಚೀನಾದ ಮಾರುಕಟ್ಟೆ ವಿರೋಧಿ ನೀತಿಯನ್ನು ನಾವು ಒಗ್ಗೂಡಿ ಎದುರಿಸುತ್ತೇವೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬಿ ಶೃಂಗಸಭೆಯ ನೇಪಥ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಚೀನಾ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿದೆ.

ಚೀನಾದಿಂದ ಆಮದಾಗುವ ವಿದ್ಯುತ್ ವಾಹನಗಳ ಮೇಲೆ ಜುಲೈ 1ರಿಂದ 38%ದವರೆಗೆ ಸುಂಕ ವಿಧಿಸುವುದಾಗಿ ಕಳೆದ ವಾರ ಯುರೋಪಿಯನ್ ಯೂನಿಯನ್ ಘೋಷಿಸಿತ್ತು. ಇದನ್ನು ಖಂಡಿಸಿದ್ದ ಚೀನಾ `ಇದು ನಗ್ನ ರಕ್ಷಣಾತ್ಮಕ ವರ್ತನೆ' ಎಂದು ಟೀಕಿಸಿತ್ತು ಮತ್ತು ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ)ದಲ್ಲಿ ದಾವೆ ಹೂಡುವ ಹಕ್ಕನ್ನು ಕಾಯ್ದಿರಿಸುವುದಾಗಿ ಹೇಳಿತ್ತು. ಅಮೆರಿಕವೂ ಕಳೆದ ತಿಂಗಳು ಚೀನಾದ ಹಸಿರು ತಂತ್ರಜ್ಞಾನ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಿದ್ದು ಚೀನಾದ ವಿದ್ಯುತ್ ವಾಹನಗಳ ಮೇಲಿನ ಸುಂಕವನ್ನು 100%ಕ್ಕೆ ಹೆಚ್ಚಿಸಿತ್ತು.

► ಚೀನಾದ ಪ್ರತಿಕ್ರಮ

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಚೀನಾದ ಹಸಿರು ತಂತ್ರಜ್ಞಾನ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ ಚೀನಾವು ಗ್ಯಾಲಿಯಂ, ಜೆರ್ಮೇನಿಯಂ ಮತ್ತು ಗ್ರಾಫೈಟ್‍ನಂತಹ ದೂರಸಂಪರ್ಕ ಮತ್ತು ವಿದ್ಯುತ್ ವಾಹನಗಳ ಉದ್ಯಮದಲ್ಲಿ ಅಗತ್ಯವಿರುವ ಖನಿಜಗಳ ರಫ್ತನ್ನು ಸೀಮಿತಗೊಳಿಸಿದೆ.

ಇದರಿಂದ ಅಂತರಾಷ್ಟ್ರೀಯ ಪೂರೈಕೆ ಸರಪಳಿಗೆ ಅಡ್ಡಿಯಾಗಿದ್ದು ಒಂದು ವೇಳೆ ಚೀನಾ ರಫ್ತನ್ನು ಮತ್ತಷ್ಟು ಸೀಮಿತಗೊಳಿಸಿದರೆ ಕಚ್ಛಾ ವಸ್ತುಗಳ ಕೊರತೆಯಿಂದ ಬೆಲೆ ಏರಿಕೆಯ ಸಮಸ್ಯೆ ಎದುರಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News