ಇಸ್ರೇಲ್ ಜೊತೆಗಿನ ಸಂಘರ್ಷ ಹೊಸ ಹಂತ ತಲುಪಿದೆ : ಹಿಜ್ಬುಲ್ಲಾ ನಾಯಕ ಹಸ್ಸನ್ ನಸ್ರಲ್ಲಾ
ಬೈರೂತ್ : ಇಸ್ರೇಲ್ ಜೊತೆಗಿನ ಸಂಘರ್ಷವು ಹೊಸ ಹಂತವನ್ನು ತಲುಪಿದೆಯೆಂದು ಹಿಜ್ಬುಲ್ಲಾ ನಾಯಕ ಹಸ್ಸನ್ ನಸ್ರಲ್ಲಾ ಶುಕ್ರವಾರ ಘೋಷಿಸಿದ್ದಾರೆ. ಜುಲೈ 30ರಂದು ಇಸ್ರೇಲ್ ಬೈರೂತ್ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದ ಹಿಝ್ಬುಲ್ಲಾ ಗುಪಿನ ಕಮಾಂಡರ್ ಫಾವದ್ ಶುಕೂರ್‌ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
" ಹಾನಿಯೇಹ್ ಹಾಗೂ ಫಾವದ್ ಶುಕೂರ್ ಅವರ ಹತ್ಯೆಗೆ ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ ಅವರು ಅಳುವುದು ಬಹಳಷ್ಟಿದೆ’’ ಎಂದು ನಸ್ರಲ್ಲಾ ಕಿಡಿಕಾರಿದರು.
ಇಸ್ರೇಲ್ ವಿರುದ್ಧ ಯಾವ ರೀತಿಯ ಆಕ್ರಮಣ ನಡೆಸಲಾಗುವುದೆಂಬುದನ್ನು ಸ್ಪಷ್ಟಪಡಿಸದ ನಸ್ರಲ್ಲಾ ಅವರು ಅತ್ಯಂತ ಚೆನ್ನಾಗಿ ಲೆಕ್ಕಾಚಾರ ಮಾಡಿಯೇ ಪ್ರತೀಕಾರ ಕೈಗೊಳ್ಳಲಾಗುವುದೆಂದು ಹೇಳಿದರು.
ಬೈರೂತ್‌ನ ದಕ್ಷಿಣ ಉಪನಗರದಲ್ಲಿ ನಡೆದ ಫಾವದ್ ಶುಕೂರ್ ಅಂತ್ಯಕ್ರಿಯೆ ಸಮಾರಂಭದಲ್ಲಿ ಸಾವಿರಾರು ಮಂದಿ ಶೋಕತಪ್ತ ಜನರು ಭಾಗವಹಿಸಿದ್ದರು. ಹಿಜ್ಬುಲ್ಲಾ ಧ್ವಜಗಳನ್ನು ಹಾಗೂ ಶುಕೂರ್ ಅವರ ಭಾವಚಿತ್ರಗಳನ್ನು ಹಿಡಿದು ಅವರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹಿಝ್ಬುಲ್ಲಾ ಧ್ವಜವನ್ನು ಹೊದಿಸಲ್ಪಟ್ಟಿದ್ದ ಶುಕೂರ್ ಪಾರ್ಥಿವ ಶರೀರದ ಶವಪೆಟ್ಟಿಗೆಯನ್ನು ಹಿಝ್ಬುಲ್ಲಾ ಹೋರಾಟಗಾರರು ಮೆರವಣಿಯಲ್ಲಿ ಕೊಂಡೊಯ್ದರು.
ಶುಕೂರ್ ಓರ್ವ ಹಿರಿಯ ಯೋಧನೆಂದು ಬಣ್ಣಿಸಿದ ಅವರು ಗೋಲನ್‌ದಿಬ್ಬದ ಡ್ರೂಝ್ ಪಟ್ಟಣದ ಫುಟಾಲ್ ಮೈದಾನದ ಮೇಲೆ ನಡೆದ ಆತನ ಕೈವಾಡವಿತ್ತೆಂಬ ಆರೋಪವನ್ನು ತಳ್ಳಿಹಾಕಿದ್ದಾರೆ.