ವಿವಾದಾತ್ಮಕ ರುವಾಂಡಾ ಗಡೀಪಾರು ಯೋಜನೆ ರದ್ದು: ಬ್ರಿಟನ್‍ನ ನೂತನ ಪ್ರಧಾನಿ ಸ್ಟಾರ್ಮರ್ ಘೋಷಣೆ
ಲಂಡನ್: ಆಶ್ರಯ ಕೋರಿ ಬ್ರಿಟನ್‍ಗೆ ಬರುವವರನ್ನು ರುವಾಂಡಾಕ್ಕೆ ಗಡೀಪಾರು ಮಾಡುವ ಸುನಾಕ್ ಸರಕಾರದ ವಿವಾದಾತ್ಮಕ ಯೋಜನೆಯನ್ನು ರದ್ದುಗೊಳಿಸುವುದಾಗಿ ಬ್ರಿಟನ್‍ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಘೋಷಿಸಿದ್ದಾರೆ.
ಪ್ರಧಾನಿಯಾಗಿ ನೇಮಕಗೊಂಡ ಬಳಿಕ ಪ್ರಥಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು `ರುವಾಂಡಾ ಯೋಜನೆ ಆರಂಭಗೊಳ್ಳುವ ಮೊದಲೇ ಸತ್ತಿದೆ ಮತ್ತು ಸಮಾಧಿಯಾಗಿದೆ' ಎಂದರು. ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ಡಾಲರ್ ವೆಚ್ಚದ ಹೊರೆಯಾಗುವ ರುವಾಂಡಾ ಯೋಜನೆಯನ್ನು ರದ್ದುಗೊಳಿಸುವುದಾಗಿ ಚುನಾವಣಾ ಪ್ರಚಾರದ ಸಂದರ್ಭ ಸ್ಟಾರ್ಮರ್ ಹೇಳಿದ್ದರು.
ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿ ಬ್ರಿಟನ್‍ಗೆ ಆಗಮಿಸುವ ವಲಸಿಗರನ್ನು ತಡೆಯುವ ರುವಾಂಡಾ ಯೋಜನೆ ನಿರ್ಗಮಿತ ಪ್ರಧಾನಿ ರಿಷಿ ಸುನಾಕ್ ಅವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದರೆ ಈ ಯೋಜನೆ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಇದುವರೆಗೆ ಒಬ್ಬ ವ್ಯಕ್ತಿಯನ್ನೂ ರುವಾಂಡಾಕ್ಕೆ ಗಡೀಪಾರು ಮಾಡಲಾಗಿಲ್ಲ. ಈ ಮಧ್ಯೆ, ಒಪ್ಪಂದದಂತೆ ಬ್ರಿಟನ್ ಸರಕಾರ ರುವಾಂಡಾಕ್ಕೆ ಹಲವು ಲಕ್ಷ ಡಾಲರ್‍ಗಳನ್ನು ಪಾವತಿಸಿದೆ.
ರುವಾಂಡಾ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರವನ್ನು ಕನ್ಸರ್ವೇಟಿವ್ ಪಕ್ಷದ ಪ್ರಮುಖ ನಾಯಕಿ ಸುಯೆಲ್ಲಾ ಬ್ರೆವರ್‍ಮನ್ ಟೀಕಿಸಿದ್ದಾರೆ. `ಹಲವು ವರ್ಷಗಳ ಕಠಿಣ ಕೆಲಸ, ಸಂಸತ್‍ನ ಕಾರ್ಯ, ಲಕ್ಷಾಂತರ ಪೌಂಡ್‍ಗಳನ್ನು ಖರ್ಚು ಮಾಡಿರುವ ಯೋಜನೆಯನ್ನು ಮುಂದುವರಿಸಿದ್ದರೆ ಖಂಡಿತಾ ಫಲ ನೀಡುತ್ತಿತ್ತು' ಎಂದವರು ಹೇಳಿದ್ದಾರೆ.