ಬಾಂಗ್ಲಾಕ್ಕೆ ಅಪ್ಪಳಿಸಿದ ಚಂಡಮಾರುತ
Update: 2023-10-25 17:48 GMT
ಢಾಕ : ಬಾಂಗ್ಲಾದ ಆಗ್ನೇಯ ಕರಾವಳಿಗೆ ಅಪ್ಪಳಿಸಿರುವ ಹಮೂನ್ ಚಂಡಮಾರುತದಿಂದ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಕನಿಷ್ಟ 2 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದಾರೆ. ಸುಮಾರು 2,75,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂಟೆಗೆ 104 ಕಿ.ಮೀ ವೇಗದ ಗಾಳಿ ಹಾಗೂ ಭಾರೀ ಮಳೆ ಸುರಿಯುತ್ತಿದ್ದು ಕರಾವಳಿಯ ಗ್ರಾಮಗಳು ಹಾಗೂ ದ್ವೀಪ ಪ್ರದೇಶಗಳಲ್ಲಿ ವಿದ್ಯುತ್ ಲೈನ್ಗಳು ತುಂಡಾಗಿ ಬಿದ್ದಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಮರ ಉರುಳಿ ಬಿದ್ದಾಗ ಅದರಡಿ ಸಿಲುಕಿ ಒಬ್ಬ ವ್ಯಕ್ತಿ, ಕಟ್ಟಡ ಕುಸಿದಾಗ ಅದರಡಿ ಸಿಲುಕಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇತರ 10 ಮಂದಿ ಗಾಯಗೊಂಡಿದ್ದಾರೆ. ಇದುವರೆಗೆ (ಬುಧವಾರ ಸಂಜೆ) 2,73,352 ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಕಮರುಲ್ ಹಸನ್ ಹೇಳಿದ್ದಾರೆ.