ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಬೈಡನ್ ಗೆ ಡೆಮಾಕ್ರಾಟ್ ನಾಯಕ ಶೆಫ್ ಆಗ್ರಹ
ಲಾಸ್ಏಂಜೆಲೀಸ್ : ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಅಧ್ಯಕ್ಷ ಜಾನ್ ಬೈಡೆನ್ ಅವರಿಗೆ ಡೆಮಾಕ್ರಾಟ್ ಪಕ್ಷದ ಪ್ರಮುಖ ನಾಯಕ, ಆ್ಯಡಂ ಶಿಫ್ ಬಹಿರಂಗ ಕರೆ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕಾಟ್ ಪಕ್ಷದಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅವಕಾಶ ಮಾಡಿಕೊಡುವಂತೆ ಶಿಫ್ ಅವರು ಬೈಡನ್ಗೆ ಮನವಿ ಮಾಡಿದ್ದಾರೆ.
ಅಮೆರಿಕ ಕಾಂಗ್ರೆಸ್ನ ಸದಸ್ಯರಾದ ಶಿಫ್ ಅವರು ಲಾಸ್ಏಂಜಲೀಸ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷರಾಗಿ ಬೈಡನ್ ಅವರ ಕಾರ್ಯನಿರ್ವಹಣೆಯನ್ನು ಪ್ರಶಂಸಿಸಿದ್ದಾರೆ. ಆದರೆ ಅಮೆರಿಕದ ಪ್ರಜಾಪ್ರಭುತ್ವದ ಬುನಾದಿಗೆ ಅತಿ ದೊಡ್ಡ ಅಪಾಯವಾಗಿರುವ ಟ್ರಂಪ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು 81 ವರ್ಷದ ಬೈಡನ್ ರಿಗೆ ಇರುವ ಸಾಮರ್ಥ್ಯದ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ನವೆಂಬರ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಜೊತೆಗೆ ನಡೆಯಲಿರುವ ಸೆನೆಟ್ ಚುನಾವಣೆಗೆ ಶಿಫ್ ಅವರು ಕ್ಯಾಲಿಫೋರ್ನಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ರ ವಯಸ್ಸು ಹಾಗೂ ಆರೋಗ್ಯವು ಅವರ ಗೆಲುವಿಗೆ ಮುಳುವಾಗಲಿದೆಯೆಂಬ ಆತಂಕ ಡೆಮಾಕ್ರಾಟ್ ಪಕ್ಷವನ್ನು ಕಾಡುತ್ತಿದೆ ಎಂದು ಶಿಫ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ಟ್ರಂಪ್ ಜೊತೆ ಟಿವಿಯಲ್ಲಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಬೈಡನ್ ಅವರು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಆಗಾಗ್ಗೆ ಅವರು ಗೊಂದಲಕ್ಕೀಡಾದಂತೆ ಹಾಗೂ ಮೇಧಾವಿತನವನ್ನು ಪ್ರದರ್ಶಿಸಲು ವಿಫಲರಾದಂತೆ ಕಾಣುತ್ತಿದ್ದರು ಎಂದರು
ಆದಾಗ್ಯೂ ಬೈಡನ್ ಅವರು ಚುನಾವಣಾಕಣದಿಂದ ಹಿಂದೆ ಸರಿಯಲು ನಿರಾಕರಿಸುತ್ತಿದ್ದಾರೆ ಹಾಗೂ ಟ್ರಂಪ್ ಅವರನ್ನ ಸೋಲಿಸಲು ತಾನೇ ಅತ್ಯುತ್ತಮ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಚುನಾವಣಾ ಪೂರ್ವ ಸಮೀಕ್ಷೆಗಳು, ಬೈಡನ್ ಹಾಗೂ ಟ್ರಂಪ್ ನಡುವೆ ತೀವ್ರ ಹಣಾಹಣಿ ನಡುವೆ ನಡೆಯುವ ಸುಳಿವನ್ನು ನೀಡಿವೆ. ಆದರೆ ಟ್ರಂಪ್ ಅವರು ಚುನಾವಣೆಯಲ್ಲಿ ನಿರ್ಣಾಯಕವಾಗಿರುವ ರಾಜ್ಯಗಳಲ್ಲಿ ಮೇಲುಗೈ ಹೊಂದಿದ್ದಾರೆಂದು ಅವು ಹೇಳಿವೆ.