ಚಬಹಾರ್ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಭಾರತ-ಇರಾನ್ ಸಹಿ

Update: 2024-01-15 17:50 GMT

ಎಸ್. ಜೈಶಂಕರ್ | Photo: NDTV 

ಟೆಹ್ರಾನ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾನ್‍ನ ಆಯಕಟ್ಟಿನ ಸ್ಥಾನದಲ್ಲಿರುವ ಚಬಹಾರ್ ಬಂದರಿನ ಮತ್ತಷ್ಟು ಅಭಿವೃದ್ಧಿಯ ಬಗ್ಗೆ ಭಾರತ ಮತ್ತ ಇರಾನ್ ಸೋಮವಾರ ಒಪ್ಪಂದಕ್ಕೆ ಸಹಿಹಾಕಿವೆ ಎಂದು ಇರಾನ್‍ನ ಸುದ್ಧಿಸಂಸ್ಥೆಗಳು ವರದಿ ಮಾಡಿವೆ.

ಇರಾನ್ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟೆಹ್ರಾನ್‍ನಲ್ಲಿ ಇರಾನ್‍ನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಮೆಹರ್ದಾದ್ ಬಝರ್ಪಾಷ್ ಜತೆ ವ್ಯಾಪಕ ಚರ್ಚೆ ನಡೆಸಿದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಭಾರತೀಯ ನಿಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಬಹಾರ್ ಬಂದರಿಗೆ ಸಂಬಂಧಿಸಿದ ದೀರ್ಘಾವಧಿಯ ಸಹಕಾರ ಚೌಕಟ್ಟನ್ನು ಸ್ಥಾಪಿಸುವ ಕುರಿತು ಉಭಯ ಸಚಿವರು ವಿವರವಾದ ಮತ್ತು ಫಲಪ್ರದ ಚರ್ಚೆ ನಡೆಸಿದರು. ಜತೆಗೆ, ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಚಬಹಾರ್ ಬಂದರು ಅಭಿವೃದ್ಧಿಯ ಕುರಿತು ಉಭಯ ದೇಶಗಳು ಸಹಿ ಹಾಕಿದ ಒಪ್ಪಂದವನ್ನು ಅಂತಿಮಗೊಳಿಸಲು ಎರಡೂ ನಿಯೋಗ ಸಮ್ಮತಿಸಿವೆ.

ದ್ವಿಪಕ್ಷೀಯ ಸಹಕಾರ ವಿಸ್ತರಣೆಗಾಗಿ ಜಂಟಿ ಸಾರಿಗೆ ಸಮಿತಿಯನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಇರಾನ್‍ನ ಸಚಿವರು ಮುಂದಿರಿಸಿದರು. ಸಮಿತಿಯ ರಚನೆಯು ಅಂತರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‍ನ ಸಾರಿಗೆ ಸಾಮರ್ಥ್ಯಗಳು ಮತ್ತು ಬಳಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ತಸ್ನಿಮ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಚಬಹಾರ್ ಬಂದರಿನಲ್ಲಿ ಸಾರಿಗೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಹೊಸ ಹೂಡಿಕೆಗಳನ್ನು ಪ್ರಾರಂಭಿಸಲು ಭಾರತ ಸನ್ನದ್ಧವಾಗಿದೆ ಎಂದು ಜೈಶಂಕರ್ ಈ ಸಂದರ್ಭ ಸ್ಪಷ್ಟಪಡಿಸಿದರು.


ಎರಡು ದಿನಗಳ ಇರಾನ್ ಪ್ರವಾಸದ ಸಂದರ್ಭ ಜೈಶಂಕರ್ ಇರಾನ್‍ನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್‍ರನ್ನು ಭೇಟಿಯಾಗಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿಸ್ತøತ ಚರ್ಚೆ ನಡೆಸಲಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

2017ರಲ್ಲಿ ಚಬಹಾರ್ ಬಂದರಿನ ಪ್ರಥಮ ಹಂತವನ್ನು ಅಂದಿನ ಅಧ್ಯಕ್ಷ ಹಸನ್ ರೂಹಾನಿ ಅಭಿವೃದ್ಧಿಪಡಿಸಿ ಚಾಲನೆ ನೀಡಿದ್ದರು. ಭಾರತಕ್ಕೆ ಕಾರ್ಯತಂತ್ರ ಮತ್ತು ಆರ್ಥಿಕ ದೃಷ್ಟಿಯಲ್ಲಿ ಪ್ರಮುಖವಾಗಿರುವ ಈ ಬಂದರಿನಲ್ಲಿ ಭಾರತ ಭಾರೀ ಹೂಡಿಕೆ ಮಾಡಿದೆ. ಪಾಕಿಸ್ತಾನವನ್ನು ಬೈಪಾಸ್ ಮಾಡಿ, ಅಫ್ಘಾನಿಸ್ತಾನ ಮತ್ತು ಮಧ್ಯ ಏಶ್ಯಾ ದೇಶಗಳನ್ನು ತಲುಪಲು ಇದು ಭಾರತಕ್ಕೆ ಅವಕಾಶ ಮಾಡಿಕೊಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News