ಅಮೆರಿಕಾ ಏರ್‌ಲೈನ್ಸ್ ಸಿಬ್ಬಂದಿ ಹಾಗೂ ಪ್ರಯಾಣಿಕನನ್ನು ಕಚ್ಚಿದ ಶ್ವಾನಕ್ಕೆ ಪೊಲೀಸ್ ಕಸ್ಟಡಿ!
ಡೆನ್ವರ್: ಎಪ್ರಿಲ್ ತಿಂಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ಕಚ್ಚಿದ್ದ ಘಟನೆಯ ತನಿಖೆಯ ನಂತರ ಶ್ವಾನವನ್ನು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆ ಶ್ವಾನವು ವಿಮಾನ ಯಾನ ಸಂಸ್ಥೆಯ ಉದ್ಯೋಗಿ ಹಾಗೂ ಪ್ರಯಾಣಿಕನಿಗೆ ಕಚ್ಚಿತ್ತು ಎಂದು ಹೇಳಲಾಗಿದೆ.
ಡೆನ್ವರ್ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯ ಪ್ರಕಾರ, ಎಪ್ರಿಲ್ 26, 2024ರಂದು ಬೆಳಗ್ಗೆ ಸುಮಾರು 11.15 ಗಂಟೆಯಲ್ಲಿ ಬೆಲ್ಲಾ ಎಂಬ ಬೆಲ್ಜಿಯನ್ ಮ್ಯಾಲಿನಾಯ್ಸ್ ತಳಿಯ ಶ್ವಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಕಚ್ಚಿತ್ತು. ಈ ಪೈಕಿ ಓರ್ವ ವ್ಯಕ್ತಿ ಅಮೆರಿಕನ್ ಏರ್‌ಲೈನ್ಸ್‌ನ ಉದ್ಯೋಗಿಯಾಗಿದ್ದರೆ, ಮತ್ತೊಬ್ಬರು ವಿಮಾನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಾಗಿದ್ದರು.
ಈ ಘಟನೆಯ ಪರಿಣಾಮವಾಗಿ, ಆ ಶ್ವಾನವನ್ನು ಡೆನ್ವರ್ ಪ್ರಾಣಿಗಳ ತಂಗುದಾಣದಲ್ಲಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ. ಅದನ್ನು ಮೇ 6ರಂದು ಬಿಡುಗಡೆ ಮಾಡಲಾಗುತ್ತದೆ. ಬೆಲ್ಲಾ ಹೆಸರಿನ ಈ ಶ್ವಾನದ ಮಾಲಕರು, ಅದು ಶ್ವಾನದಳದ ಶ್ವಾನವೆಂದು ಪ್ರತಿಪಾದಿಸಿದ್ದು, ಇಂತಹ ಶ್ವಾನಗಳಿಗೆ ಕೆಲವು ರಕ್ಷಣೆಗಳಿರುತ್ತವೆ.
ಡೆನ್ವರ್ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯ ಪ್ರಕಾರ, ಉದ್ಯೋಗಿಯ ಮುಖ ಹಾಗೂ ತುಟಿಯನ್ನು ಕಚ್ಚಲಾಗಿದ್ದರೆ, ಪ್ರಯಾಣಿಕರ ಮೊಣಕೈ ಅನ್ನು ಕಚ್ಚಲಾಗಿದೆ. ಇಯಾನ್ ಡನ್ಬರ್ ಶ್ವಾನ ಕಡಿತ ಮಾಪಕದ ಪ್ರಕಾರ, ಈ ಕಡಿತವನ್ನು ನಾಲ್ಕನೆಯ ಹಂತದ ಕಡಿತ ಎಂದು ಪರಿಗಣಿಸಲಾಗಿದೆ. ಆದರೆ, ಈ ಘಟನೆಯಲ್ಲಿ ಹಲವಾರು ಹಂತದ ನಾಲ್ಕು ಕಡಿತಗಳಾಗಿರುವುದರಿಂದ, ಈ ಕಡಿತವು ಐದನೆ ಹಂತದ ವ್ಯಾಪ್ತಿಗೆ ಬರುತ್ತದೆ.
ಇಯಾನ್ ಡನ್ಬರ್ ಶ್ವಾನ ಕಡಿತ ಮಾಪಕದ ಪ್ರಕಾರ, ಐದನೆ ಹಂತದ ಘಟನೆಗೆ ಕಾರಣವಾಗುವ ಶ್ವಾನವು ಜನರ ಸುತ್ತ ಇರಲು ಸುರಕ್ಷಿತವಲ್ಲ ಎಂದು ಪರಿಗಣಿಸಲಾಗುತ್ತದೆ. ಇಂತಹ ಶ್ವಾನಗಳಿಗೆ ದಯಾಮರಣವನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಹಾಗೂ ದಾಳಿಗೂ ಮುನ್ನ ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು ಎಂಬ ಸಂಗತಿಯಿನ್ನೂ ಅಸ್ಪಷ್ಟವಾಗಿರುವುದರಿಂದ ಈವರೆಗೆ ಯಾವುದೇ ತೀರ್ಪನ್ನು ನೀಡಲಾಗಿಲ್ಲ.
ಒಂದು ವೇಳೆ ಶ್ವಾನವನ್ನು ಪ್ರಚೋದಿಸಿದ್ದರೆ ಅಥವಾ ತನ್ನ ಮಾಲಕನನ್ನು ಹಾನಿಯಿಂದ ರಕ್ಷಿಸಲು ಶ್ವಾನವು ದಾಳಿ ನಡೆಸಿದ್ದರೆ ಫಲಿತಾಂಶವು ವಿಭಿನ್ನವಾಗಿರುತ್ತದೆ.
ಹಲವಾರು ಪ್ರಯಾಣಿಕರು ಸೇವಾ ಶ್ವಾನಗಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ ಹಾಗೂ ವಿಮಾನ ಯಾನ ಸಂಸ್ಥೆಗಳು ಹಾಗೆ ಮಾಡಲು ವಿವೇಚನಾಯುಕ್ತ ಅನುಮತಿ ನೀಡುತ್ತವೆ. ಸೇವಾ ಶ್ವಾನಗಳು ಭಾರಿ ತರಬೇತಿ ಪಡೆದ ಪ್ರಾಣಿಗಳಾಗಿದ್ದು, ಮನುಷ್ಯರ ಮೇಲೆ ಅವು ದಾಳಿ ನಡೆಸಲು ಸಾಕಷ್ಟು ಪ್ರಚೋದನೆಯ ಅಗತ್ಯ ಬೀಳುತ್ತದೆ. ತಮ್ಮ ಆಕ್ರಮಣಕಾರಿ ವರ್ತನೆಯನ್ನು ಮರೆಯಲು ಅವಕ್ಕೆ ತೀವ್ರ ಸ್ವರೂಪದ ತರಬೇತಿ ನೀಡಲಾಗಿರುತ್ತದೆ. ಉಗ್ರ ವರ್ತನೆಯ ಸಂದರ್ಭ ಎದುರಾದಾಗ ಹಲವಾರು ಸೇವಾ ಶ್ವಾನಗಳಿಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ತರಬೇತಿ ನೀಡಲಾಗಿರುತ್ತದೆ.